ಕಾರ್ಕಳ–ನಕ್ರೆ ರಸ್ತೆಯಲ್ಲಿ ರಸ್ತೆ ಅಪಘಾತ : ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರು ಪ್ರಾಣಾಪಾಯದಿಂದ ಪಾರು

0
11

ಕಾರ್ಕಳ : ಸರ್ವಜ್ಞ ವೃತ್ತದಿಂದ ನಕ್ರೆ ಕಡೆಗೆ ತೆರಳುವ ರಸ್ತೆಯಲ್ಲಿ ಟಾಟಾ ಎಸಿ ಟೆಂಪೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರು ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ನಡೆದಿದೆ.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ರಿಯೇಟಿವ್ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಬಿಪಿನ್ ಚಂದ್ರಲಾಲ್ ನಕ್ರೆ ಅವರನ್ನು ಅವರ ಮನೆಗೆ ಕಾರಿನಲ್ಲಿ ಬಿಟ್ಟು ವಾಪಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಪರಪ್ಪು ಸೇತುವೆ ದಾಟಿ ಸ್ವಲ್ಪ ದೂರ ಸಾಗುತ್ತಿದ್ದಾಗ ರಸ್ತೆ ಬದಿಯಲ್ಲಿ ಒಂದು ಕಾರು ನಿಲ್ಲಿಸಲಾಗಿತ್ತು. ಇದೇ ವೇಳೆ ಎದುರು ದಿಕ್ಕಿನಿಂದ ಅತಿವೇಗದಲ್ಲಿ ಬಂದ ಶ್ರೀ ದೇವಿ ಫರ್ನಿಚರ್ಸ್ ಟಾಟಾ ಎಸಿ ಟೆಂಪೋ ನಿಯಂತ್ರಣ ತಪ್ಪಿ ಭೀಮಗುಳಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಪಕ್ಕದ ಕಮರಿಗೆ ಜಾರಿದ್ದು, ಚಾಲಕನ ಬದಿಯ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಟಾಟಾ ಎಸಿ ವಾಹನಕ್ಕೂ ಹಾನಿಯಾಗಿದೆ.

ಅದೃಷ್ಟವಶಾತ್ ಎರಡೂ ವಾಹನಗಳಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಾಟಾ ಎಸಿ ವಾಹನದ ಅತಿಯಾದ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದೇ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ಅಸುರಕ್ಷಿತವಾಗಿ ಕಾರೊಂದನ್ನು ನಿಲ್ಲಿಸುವ ಪ್ರವೃತ್ತಿಯಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಈ ವಾಹನ ಸವಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದಲ್ಲದೆ, ಶ್ರೀದೇವಿ ಫರ್ನಿಚರ್ ಮಾಲೀಕತ್ವದ ಟಾಟಾ ಎಸಿ ಟೆಂಪೋವನ್ನು ಚಾಲಕ ಅತಿವೇಗದಲ್ಲಿ ಚಲಾಯಿಸುತ್ತಿರುವ ಬಗ್ಗೆ ಈ ದೂರುಗಳು ಕೇಳಿಬಂದಿವೆ.