ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಎಐ ಕ್ರಾಂತಿ; ‘ಶ್ರೀ ವಾಹನ್’ ಸ್ವಯಂಚಾಲಿತ ವಾಹನ ಮತ್ತು ‘ಶ್ರೀನಿಬೋಟ್’ ರೋಬೋಟ್ ಅನಾವರಣ

0
16

ಮಂಗಳೂರು : ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಪ್ರತಿಭೆ ಮತ್ತು ನವೋದ್ಯಮ ಸಾಮರ್ಥ್ಯಕ್ಕೆ ಸಾಕ್ಷಿಯಾಗುವ ಎರಡು ಮಹತ್ವದ ಎಐ (Artificial Intelligence) ಆಧಾರಿತ ಆವಿಷ್ಕಾರಗಳಾದ ‘ಶ್ರೀ ವಾಹನ್’ ಸ್ವಯಂಚಾಲಿತ ವಿದ್ಯುತ್ ವಾಹನ ಹಾಗೂ ‘ಶ್ರೀನಿಬೋಟ್’ ಎಐ ರಿಸೆಪ್ಷನ್ ರೋಬೋಟ್ ಅನ್ನು ಗುರುವಾರ ಯಶಸ್ವಿಯಾಗಿ ಅನಾವರಣಗೊಳಿಸಲಾಯಿತು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಆರ್ಥಿಕ ಸಹಕಾರದೊಂದಿಗೆ ವಿದ್ಯಾರ್ಥಿಗಳು ಅಧ್ಯಾಪಕರ ಮಾರ್ಗದರ್ಶನದಲ್ಲಿ ಈ ಯೋಜನೆಗಳನ್ನು ಅಭಿವೃದ್ಧಿಪಡಿಸಿದ್ದು, ಸಂಶೋಧನೆ, ನವೋದ್ಯಮ ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.

‘ಶ್ರೀ ವಾಹನ್’ ವಿಶೇಷತೆ

ಕೃತಕ ಬುದ್ಧಿಮತ್ತೆ ಆಧಾರಿತ ‘ಶ್ರೀ ವಾಹನ್’ ಸ್ವಯಂಚಾಲಿತ ವಿದ್ಯುತ್ ವಾಹನದಲ್ಲಿ LiDAR, AI Vision System, GPS ಆಧಾರಿತ ನ್ಯಾವಿಗೇಷನ್, AI ಅಸಿಸ್ಟೆಂಟ್, ಅಲ್ಟ್ರಾಸೋನಿಕ್ ಸೆನ್ಸರ್ ಹಾಗೂ Visual SLAM ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.

ಆರು ಆಸನಗಳ ಸಾಮರ್ಥ್ಯ ಹೊಂದಿರುವ ಈ ವಾಹನವನ್ನು ಅಗತ್ಯವಿದ್ದರೆ ರೋಗಿಗಳ ಸಾಗಣೆಗೆ ಪರಿವರ್ತಿಸಬಹುದಾಗಿದೆ. ಒಂದೇ ಬಾರಿ ಚಾರ್ಜ್ ಮಾಡಿದರೆ ಸುಮಾರು 20 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದ್ದು, 5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಮ್ಯಾನುಯಲ್ ಮೋಡ್‌ನಲ್ಲಿ ಗಂಟೆಗೆ 28 ಕಿ.ಮೀ. ಹಾಗೂ ಸ್ವಯಂಚಾಲಿತ ಮೋಡ್‌ನಲ್ಲಿ ಗಂಟೆಗೆ 5 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲದು.

ಸುಮಾರು ₹4 ರಿಂದ ₹5 ಲಕ್ಷ ವೆಚ್ಚದಲ್ಲಿ ಕೇವಲ ಆರು ತಿಂಗಳ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು, ಪ್ರೊ. ವಿಶ್ವಾಸ್ ಸಿ. ಶೆಟ್ಟಿ ಮಾರ್ಗದರ್ಶನದಲ್ಲಿ ರಿಸರ್ಚ್ ಅಸೋಸಿಯೇಟ್ ವಿಶಾಕ್ ಮೆಂಡನ್ ಹಾಗೂ ವಿದ್ಯಾರ್ಥಿಗಳಾದ ಶ್ರೇಯಸ್, ಅದ್ವಿತೀಯ, ಉಜ್ವಲ್, ಅಕ್ಷಯ್, ಮಂಜುನಾಥ್ ಮತ್ತು ಪ್ರಖ್ಯಾತ್ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

‘ಶ್ರೀನಿಬೋಟ್’ – ಎಐ ಸ್ವಾಗತ ರೋಬೋಟ್

‘ಶ್ರೀನಿಬೋಟ್’ ವಿಶ್ವವಿದ್ಯಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು ಹಾಗೂ ಅತಿಥಿಗಳನ್ನು ಸ್ವಾಗತಿಸಿ, ನೈಸರ್ಗಿಕ ಧ್ವನಿ ಸಂವಾದದ ಮೂಲಕ ಪ್ರಶ್ನೆಗಳಿಗೆ ಉತ್ತರಿಸುವ ಎಐ ಆಧಾರಿತ ರಿಸೆಪ್ಷನ್ ರೋಬೋಟ್ ಆಗಿದೆ.

5 ಅಡಿ ಎತ್ತರದ ಈ ರೋಬೋಟ್‌ನಲ್ಲಿ 11.6 ಇಂಚಿನ ಟಚ್ ಡಿಸ್‌ಪ್ಲೇ, ಮುಖ ಗುರುತಿಸುವಿಕೆ ವ್ಯವಸ್ಥೆ, ಬಹುಭಾಷಾ ಸಂವಹನ, AI Voice Assistant ಹಾಗೂ 8–10 ಗಂಟೆಗಳ ಬ್ಯಾಟರಿ ಸಾಮರ್ಥ್ಯ ಅಳವಡಿಸಲಾಗಿದೆ. ಶಿಕ್ಷಣ ಸಂಸ್ಥೆಗಳ ಜೊತೆಗೆ ಆಸ್ಪತ್ರೆಗಳು, ಹೋಟೆಲ್‌ಗಳು, ಕೈಗಾರಿಕೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿಯೂ ಬಳಕೆಯಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಸುಮಾರು ₹5 ಲಕ್ಷ ವೆಚ್ಚದಲ್ಲಿ ಕೇವಲ ಒಂದು ತಿಂಗಳಲ್ಲೇ ಈ ರೋಬೋಟ್ ನಿರ್ಮಾಣಗೊಂಡಿದ್ದು, ಅಖಿಲ್ ಕೆ.ಪಿ. ಮಾರ್ಗದರ್ಶನದಲ್ಲಿ ರಿಸರ್ಚ್ ಅಸೋಸಿಯೇಟ್‌ಗಳಾದ ನಿಕೇತ್ ಜಾದವ್, ಜೋಯಲ್ ಜೋಸ್ ಹಾಗೂ ಸಮರ್ಥ್ ನಾಗನೂರ್ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ.

ಗಣ್ಯರ ಉಪಸ್ಥಿತಿ

ಆವಿಷ್ಕಾರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್, ಎ. ವಿಜಯಲಕ್ಷ್ಮಿ ಆರ್. ರಾವ್, ಉಪಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ, ಕುಲಸಚಿವ ಡಾ. ಅನಿಲ್ ಕುಮಾರ್, ಡಾ. ಅಜಯ್ ಕುಮಾರ್, ಡಾ. ಜಯಶ್ರೀ ಬೋಳಾರ್, ಡಾ. ರಾಮಕೃಷ್ಣ ಎನ್. ಹೆಗಡೆ, ಡಾ. ಪ್ರವೀಣ್ ಬಿ.ಎಂ. ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಆವಿಷ್ಕಾರಗಳ ಕಾರ್ಯವೈಖರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.