ಮಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಆಹಾರ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಆರೋಗ್ಯ ವಿಭಾಗದ ಅಧಿಕಾರಿಗಳು ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಸ್ಟೇಟ್ ಬ್ಯಾಂಕ್ ವೃತ್ತದ ಸುತ್ತಮುತ್ತಲಿನ ಬೀದಿಬದಿ ಫಾಸ್ಟ್ ಫುಡ್ ಅಂಗಡಿಗಳ ಮೇಲೆ ಮಿಂಚಿನ ತಪಾಸಣೆ ನಡೆಸಿದ್ದಾರೆ.
ತಪಾಸಣೆಯ ವೇಳೆ ಕಳಪೆ ಗುಣಮಟ್ಟದ ಮಾಂಸ, ನಿಷೇಧಿತ ಕೃತಕ ಬಣ್ಣಗಳು ಹಾಗೂ ಅತಿಯಾಗಿ ಅಜಿನೊಮೊಟೊ (MSG) ಬಳಸಿ ಫ್ರೈಡ್ ರೈಸ್, ನೂಡಲ್ಸ್, ಕಬಾಬ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ಅಂಗಡಿಗಳು ಪತ್ತೆಯಾಗಿವೆ. ಅಧಿಕಾರಿಗಳು ಹಾನಿಕಾರಕ ರಾಸಾಯನಿಕಗಳನ್ನು ವಶಪಡಿಸಿಕೊಂಡು ಸಂಬಂಧಿತ ವ್ಯಾಪಾರಿಗಳಿಗೆ ನಗದು ದಂಡ ವಿಧಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲಿ ನಿಷೇಧಿತ ಬಣ್ಣಗಳನ್ನು ಬಳಸುತ್ತಿದ್ದ ಮೂರು ಆಹಾರ ಮಳಿಗೆಗಳಿಗೆ ಒಟ್ಟು ₹6,000 ದಂಡ ವಿಧಿಸಲಾಗಿದೆ.
ಆರೋಗ್ಯ ತಜ್ಞರ ಪ್ರಕಾರ, ಒಂದೇ ಅಡುಗೆ ಎಣ್ಣೆಯನ್ನು ಪದೇ ಪದೇ ಕಾಯಿಸುವುದರಿಂದ ಅದರಲ್ಲಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಜೀರ್ಣಾಂಗ ಸಮಸ್ಯೆಗಳಿಗೆ ಕಾರಣವಾಗುವ ವಿಷಕಾರಿ ಅಂಶಗಳು ಉತ್ಪತ್ತಿಯಾಗುತ್ತವೆ. ಇದೇ ರೀತಿ ಅತಿಯಾದ ಪ್ರಮಾಣದಲ್ಲಿ ಅಜಿನೊಮೊಟೊ ಬಳಕೆಯಿಂದ ರಕ್ತದೊತ್ತಡ, ಮಧುಮೇಹ, ಅಲರ್ಜಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ತಪಾಸಣೆ ವೇಳೆ ಅಧಿಕಾರಿಗಳು ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಆಹಾರ ತಯಾರಿಸುವವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಳಪೆ ಗುಣಮಟ್ಟದ ಫಾಸ್ಟ್ ಫುಡ್ ಮಾರಾಟ ಕೇವಲ ಬೀದಿಬದಿ ಅಂಗಡಿಗಳಿಗೆ ಸೀಮಿತವಾಗದೆ, ವಿವಿಧ ವಾಣಿಜ್ಯ ಸಂಕೀರ್ಣಗಳಲ್ಲಿರುವ ಕೆಫೆಗಳು ಹಾಗೂ ಕ್ಯಾಂಟೀನ್‌ಗಳಿಗೂ ವಿಸ್ತರಿಸಿದೆ ಎನ್ನಲಾಗಿದೆ. ವಿಶೇಷವಾಗಿ ಶಾಲೆ-ಕಾಲೇಜುಗಳ ಸುತ್ತಮುತ್ತ ಕಡಿಮೆ ದರದ ಆಫರ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಇಂತಹ ಮಳಿಗೆಗಳಲ್ಲಿ ಆಹಾರ ಗುಣಮಟ್ಟದ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.
ತಜ್ಞರ ಪ್ರಕಾರ, ಇಂತಹ ಆಹಾರಗಳ ನಿರಂತರ ಸೇವನೆಯಿಂದ ಬೊಜ್ಜು, ಫ್ಯಾಟಿ ಲಿವರ್, ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯವಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆ-ಕಾಲೇಜುಗಳ ಸುತ್ತಮುತ್ತ ಇರುವ ಕೆಫೆಗಳು ಹಾಗೂ ಫಾಸ್ಟ್ ಫುಡ್ ಮಳಿಗೆಗಳ ಮೇಲೂ ನಿಯಮಿತವಾಗಿ ತಪಾಸಣೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

