ನ್ಯಾಯಾಲಯದ ಕಲಾಪಗಳ ವಿಡಿಯೊ ಹಂಚಿಕೆಗೆ ಸುಪ್ರೀಂ ಕೋರ್ಟ್ ತಡೆ

0
5

ನವದೆಹಲಿ: ನ್ಯಾಯಾಲಯಗಳ ಕಲಾಪಗಳ ವಿಡಿಯೊಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅನುಮತಿಯಿಲ್ಲದೆ ಹಂಚಿಕೊಳ್ಳುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ನ್ಯಾಯಾಲಯದ ಕಲಾಪಗಳ ವಿಡಿಯೊಗಳನ್ನು ಅನಿಯಂತ್ರಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿರುವ ಪ್ರವೃತ್ತಿಯನ್ನು ಸುಪ್ರೀಂ ಕೋರ್ಟ್ “ಚೀಲದಿಂದ ಹೊರಬಂದ ರಾಕ್ಷಸ” ಎಂದು ಬಣ್ಣಿಸಿದೆ. ಸಂಬಂಧಿತ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ನ್ಯಾಯಾಂಗ ಪ್ರಕ್ರಿಯೆಗಳ ಆಡಿಯೊ ಅಥವಾ ವಿಡಿಯೊಗಳನ್ನು ರೆಕಾರ್ಡ್ ಮಾಡಿ, ಸಂಪಾದಿಸಿ, ಪೋಸ್ಟ್ ಮಾಡುವುದು, ಮರುಪೋಸ್ಟ್ ಮಾಡುವುದು ಅಥವಾ ಯಾವುದೇ ಡಿಜಿಟಲ್ ವೇದಿಕೆಯಲ್ಲಿ ಅಪ್‌ಲೋಡ್ ಮಾಡುವುದನ್ನು ನಿಷೇಧಿಸಲಾಗಿದೆ.

ನ್ಯಾಯಾಲಯದ ಕಲಾಪಗಳ ನೇರಪ್ರಸಾರ ಮತ್ತು ವಿಡಿಯೊಗಳ ದುರ್ಬಳಕೆಯನ್ನು ನಿಯಂತ್ರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರಿದ್ದ ಪೀಠ ಈ ಮಧ್ಯಂತರ ಆದೇಶ ನೀಡಿದೆ.

ಆದೇಶದ ಪ್ರಕಾರ, ಸಂಬಂಧಿತ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅಥವಾ ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಯ ಪೂರ್ವಾನುಮತಿ ಇಲ್ಲದೆ ನ್ಯಾಯಾಲಯದ ಕಲಾಪಗಳ ಆಡಿಯೊ-ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳು ಅಥವಾ ಇತರ ಡಿಜಿಟಲ್ ವೇದಿಕೆಗಳಲ್ಲಿ ಪ್ರಸಾರ ಮಾಡುವಂತಿಲ್ಲ.

ಆದರೆ, ಈ ಆದೇಶವು ನ್ಯಾಯಾಲಯದ ಕಲಾಪಗಳ ಬಗ್ಗೆ ಸುದ್ದಿ ವರದಿ ಮಾಡುವ ಮಾಧ್ಯಮಗಳ ಹಕ್ಕಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಅರ್ಜಿದಾರರ ವಾದದಂತೆ, ನ್ಯಾಯಾಲಯದ ಕಲಾಪಗಳ ಆಯ್ದ ಹಾಗೂ ಸಂದರ್ಭೋಚಿತವಲ್ಲದ ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ನ್ಯಾಯಾಲಯಗಳ ಘನತೆಗೆ ಧಕ್ಕೆ ತರುತ್ತಿದ್ದು, ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೂ ಹಾನಿ ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ತಾತ್ಕಾಲಿಕ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ಹೊರಡಿಸಿದೆ.