ಈ ಸನ್ಮಾನ ಸಮಾಜ ನಿಮ್ಮ ಸಾಧನೆಗೆ ಕೊಟ್ಟಂತ ಗೌರವ : ಡಾ.ನಾಗರಾಜ ವಿ.ಬೈರಿ

0
16

ದಾವಣಗೆರೆ : ಕಳೆದ 36 ವರ್ಷಗಳಿಂದ ನಿರಂತರವಾಗಿ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುತ್ತಾ ಅವರ ಮುಂದಿನ ದಾರಿಯ ಗುರಿಯನ್ನು ತೋರಿಸುವಂತಹ ಈ ಸಂಸ್ಥೆ ಕಲಾಕುಂಚ ಸಂಸ್ಥೆ ಇಲ್ಲಿವರೆಗೆ ಸುಮಾರು 40 ಸಾವಿರ ಮಕ್ಕಳಿಗೆ ಸನ್ಮಾನ ಮಾಡಿ ಪ್ರೋತ್ಸಾಹ ನೀಡಿದೆ ಎಂದು ಮೈಸೂರಿನ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಡಾ.ನಾಗರಾಜ ವಿ.ಬೈರಿ ಹೇಳಿದರು.

ಇಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿ ನಿಮಗೆ ನೀಡಿರುವ ಪದಕ ಸಾಮಾನ್ಯ ಪದಕವಲ್ಲ. ಸಮಾಜ ನೀವು ಮಾಡಿರುವ ಸಾಧನೆಗೆ ಕೊಟ್ಟಂತಹ ಗೌರವ. ಇದನ್ನು ಎಂದಿಗೂ ನೀವು ಮರೆಯುವಂತಿಲ್ಲ. ದಾವಣಗೆರೆಯ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೋಡಿದರೆ ನನಗೆ ಯಾವುದೋ ಹಬ್ಬವನ್ನು ಆಚರಿಸಿದಂತಾಗುತ್ತಿದೆ.

ಈ ಮಕ್ಕಳ ಸನ್ಮಾನದ ಸಂಖ್ಯೆಯನ್ನು ಬಹುಶಃ ಗಿನ್ನೀಸ್ ಬುಕ್ ಗೆ ಮಾಹಿತಿ ನೀಡಿದಂತೆ ಕಾಣಲ್ಲ. ಇಲ್ಲದಿದ್ದರೆ ಇದು ಗಿನ್ನೀಸ್ ಪುಸ್ತಕಕ್ಕೆ ರೆಕಾರ್ಡ್ ಆಗುತ್ತಿತ್ತು. ನಿರಂತರವಾಗಿ ಪ್ರತಿವರ್ಷ ಕೂಡಾ 36 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ ಅಂದರೆ ನಿಮ್ಮ ಮೇಲಿನ ಪ್ರೀತಿ ಅಲ್ಲದೇ ನಿಮ್ಮ ಭವಿಷ್ಯದ ಬಗ್ಗೆ ಎಷ್ಟು ಬದ್ಧತೆ ಇದೆ ಎಂಬುದನ್ನು ತೋರಿಸುತ್ತಿದೆ. ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125, ಒಟ್ಟು 625ಕ್ಕೆ 625 ಅಂಕಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದೀರಿ. ಇಲ್ಲಿ ನಿಮಗೆ ನೀಡುವ ಸನ್ಮಾನ ಪತ್ರವೇ ವಿಶೇಷವಾಗಿದೆ. ಇದರಲ್ಲಿ ನಿಮ್ಮ ಹೆಸರು, ಫೋಟೋ, ತಂದೆ-ತಾಯಿ, ಶಾಲೆ ಹೆಸರೂ ಕೂಡ ಇದೆ. ನೀವೆಲ್ಲರೂ ಕೂಡಾ ಉತ್ತಮ ಮಾರ್ಗವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಲಾಕುಂಚ ಸಂಸ್ಥೆ ಅಧ್ಯಕ್ಷ ವಾಸುದೇವ ರಾಯ್ಕರ್ ಮಾತನಾಡಿ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುವುದು ಒಂದು, ಎರಡು ಮೂರು ವರ್ಷ ಮಾಡುವುದು ಸಹಜ, ಆದರೆ ಸತತವಾಗಿ 35 ವರ್ಷಗಳಿಂದ ಇಂತಹ ಕಾರ್ಯಕ್ರಮ ಮಾಡುವುದು ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಗೌರವಾಧ್ಯಕ್ಷ ಕೆ.ಎಚ್.ಮಂಜುನಾಥ್ ಮತ್ತು ತಂಡದ ಪರಿಶ್ರಮದಿಂದ ಈ ಕನಸಿನ ಕೂಸು, ಇಂದು ಬಹಳ ಎತ್ತರಕ್ಕೆ ಬೆಳೆದಿದೆ.

ಮಕ್ಕಳು ಎಸ್ಸೆಸ್ಸೆಲ್ಸಿ ವರೆಗೆ ತಂದೆ ತಾಯಿ ಏನು ಕಲಿಸುತ್ತಾರೋ ಅದನ್ನು ಕಲಿಯುತ್ತಾರೆ. ನಂತರ ಅವರು ಬೇರೆ ಬೇರೆ ಕಡೆಗೆ ಪ್ರೇರೇಪಣೆ ಆಗುತ್ತೆ. ಆ ಪ್ರೇರೇಪಣೆಯನ್ನು ನಿಲ್ಲಿಸುವುದು ಪೋಷಕರ ಕರ್ತವ್ಯವಾಗಿದೆ. ನಿಮ್ಮ ಮಕ್ಕಳು ಓದಿ ಬೇರೆ ದೇಶಕ್ಕೆ ಕೆಲಸಕ್ಕೆ ಹೋಗುತ್ತಾರೆ, ಅಲ್ಲಿಯೇ ಕೆಲಸಕ್ಕೆ ಸೇರಿ ಇಲ್ಲಿಗೆ ವಾಪಾಸಾಗುವ ಸಾಧ್ಯತೆ ಕಡಿಮೆ ಇದೆ. ನೀವು ನಿಮ್ಮ ಮಕ್ಕಳನ್ನು ಕಲಿಸಿ, ಬೆಳೆಸಿ ಹೊರದೇಶಕ್ಕೆ ಕಳಿಸುತ್ತೀರಿ. ಆದರೆ ನೀವು ಇಲ್ಲಿ ವೃದ್ಧಾಶ್ರಮದಲ್ಲಿ ಕಾಲ ಕಳೆಯುವಂತಾಗಿದೆ. ಮಕ್ಕಳು ಫಸ್ಟ್ ರ‍್ಯಾಂಕ್ ರಾಜು ಆಗುವುದು ಬೇಡ, ಅವರಿಗೆ ಸಂಸ್ಕಾರ ಸಂಸ್ಕೃತಿ ಕಲಿಸಿ. ಓದಿನ ಜೊತೆಗೆ ಇತರೆ ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿಯಂತಹ ಭಾಗವಹಿಸುವಂತೆ ಮಾಡಿರಿ ಎಂದು ತಿಳಿಸಿದರು.
ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ 625ಕ್ಕೆ 625 ಅಂಕಗಳಿಸಿದ ಚಿಕ್ಕಮಗಳೂರು ಸೆಂಟ್ ಮೆರಿಸ್ ಶಾಲೆಯ ಬೃಂದಾ ಎಂ.ತಾಪ್ಸೆ, ಕಲಾಕುಂಚ ಮೈಸೂರು ಶಾಖೆ ಸದಸ್ಯರಾದ ಎನ್.ಗಂಗಾಧರಪ್ಪ, ಕೆ.ಎಂ.ಮುನಿಯಪ್ಪ, ಕೇರಳ ರಾಜ್ಯದ ಕಲಾಕುಂಚ ಗಡಿನಾಡ ಶಾಖೆ ಅಧ್ಯಕ್ಷೆ ಜಯಲಕ್ಷಿ ಶ್ರೀರಾಮ ಕಾರಂತ, ಕಲಾಕುಂಚ ಸಂಸ್ಥೆ ಗೌರವಾಧ್ಯಕ್ಷ ಕೆ.ಎಚ್.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ, ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ ಶೆಣೈ, ಗೌರವಾಧ್ಯಕ್ಷೆ ವಸಂತಿ ಮಂಜುನಾಥ, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಸದಸ್ಯರಾದ ಶಿಲ್ಪಾ ಉಮೇಶ, ಚನ್ನಬಸವ ಶೀಲವಂತ್, ವೀರೇಶ, ಶ್ವೇತಾ, ಶೈಲಾ ಪ್ರಶಾಂತ್, ಚನ್ನಬಸಪ್ಪ, ಗಿರಿಜಮ್ಮ, ಶೈಲ ವಿನೋದ, ಆನಂದ ಶೆಟ್ಟಿ, ಪ್ರಸಾದ್, ಕೃಷ್ಣಮೂರ್ತಿ, ಭಾರತಿ ಖಮಿತ್ಕರ್, ಇತರರು ಇದ್ದರು.

ಸುಪ್ರಜಾರಾವ್ ಸುಮನ್ ಪ್ರಾರ್ಥಿಸಿದರೆ, ಪುಷ್ಪಾ ಮಂಜುನಾಥ ಸ್ವಾಗತಿಸಿದರು. ಮಂಜುಳಾ ಬಗೇರಾ ಕಾರ್ಯಕ್ರಮ ನಿರೂಪಿಸಿದರೆ, ಪ್ರಭಾ ರವೀಂದ್ರ ವಂದಿಸಿದರು. ಕಾರ್ಯಕ್ರಮದ ಮೊದಲು ಗಣ್ಯರನ್ನು, ಪ್ರತಿಭಾನ್ವಿತ ಮಕ್ಕಳನ್ನು ಮಂಗಳವಾದ್ಯದ ಮೂಲಕ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು. ಮಂಜುಳಾ ಪ್ರಸಾದ್ ಬಂಗೇರ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ಇತ್ತೀಚೆಗೆ ಸ್ವರ್ಗಸ್ಥರಾದ ಗಾನ ಕೋಗಿಲೆ ಎಸ್.ಜಾನಕಿಯವರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು