ಉಡುಪಿ : ಸಂಸ್ಕೃತಭಾಷೆ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ನಿಜವಾದ ಪ್ರತಿನಿಧಿ. ಆದ್ದರಿಂದ ಸಂಸ್ಕೃತ ಕಲಿಯುವವರನ್ನು ಕಲಿಸುವವರನ್ನು ಗುರುತಿಸಿ ಗೌರವಿಸೋದು ತುಂಬಾ ಮುಖ್ಯ ಎಂದು ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೇಳಿದರು.
ಭಾನುವಾರ ಉಡುಪಿ ಜಿಲ್ಲಾ ಸಂಸ್ಕೃತ ಶಿಕ್ಷಕ ಸಂಘ ಆಶ್ರಯದಲ್ಲಿ ಪರ್ಯಾಯ ಶೀರೂರುಮಠ, ಶ್ರೀಕೃಷ್ಣ ಮಠ ಸಹಯೋಗದಲ್ಲಿ ರಾಜಾಂಗಣದಲ್ಲಿ ನಡೆದ ಎಸ್ ಎಸ್ ಎಲ್ ಸಿಯ ಪ್ರತಿಭಾವಂತ ಸಂಸ್ಕೃತ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಸಂಸ್ಕೃತ ಭಾಷೆ ಉಳಿದ ಭಾಷೆಗಿಂತ ಭಿನ್ನ . ವ್ಯುತ್ಪತ್ತಿ ಎಂಬುದು ಸಂಸ್ಕೃತ ಭಾಷೆಯ ವಿಶೇಷ. ಆದ್ದರಿಂದ ವಸ್ತು, ವ್ಯಕ್ತಿಗಳಿಗೆ ಬರೀ ಸಂಜ್ಞೆಯಾಗಿ ಮಾತ್ರ ಶಬ್ದ ಬಳಸದೆ ಅನ್ವರ್ಥವಾಗಿ ಬಳಸಲಾಗುತ್ತದೆ ಎಂದರು. ಪರ್ಯಾಯ ಶೀರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ, ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಲೋಕೇಶ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ರಮೇಶ್ ಟಿ.ಎಸ್ ಉಪನ್ಯಾಸ ನೀಡಿದರು. ಸಂಸ್ಕೃತ ಶಿಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ್ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ ಹೆಗಡೆ ವಂದಿಸಿದರು. ಸನ್ಮಾನಿತ ವಿದ್ಯಾರ್ಥಿಗಳ ಪಟ್ಟಿಯನ್ನು ಶಿಕ್ಷಕ ರಾಮಚಂದ್ರ ಭಟ್ ವಾಚಿಸಿದರು. ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸುಮಾರು 304 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

