ಸಚ್ಚೇರಿಪೇಟೆ: ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜುಲೈ 27 ರಂದು ಕಾರ್ಗಿಲ್ ವಿಜಯ ದಿವಸವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ಸೇನೆಯ ನಿವೃತ್ತ ಯೋಧರು, ಕಾರ್ಗಿಲ್ ಯುದ್ಧದ ಆಪರೇಷನ್ ಹಾಗೂ ಆಪರೇಷನ್ ವಿಜಯ ಸ್ಟಾರ್ ಪದಕ ಪುರಸ್ಕೃತ ಪ್ರವೀಣ್ ಶೆಟ್ಟಿ ಅವರು ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ತಮ್ಮ ಯುದ್ಧದ ಅನುಭವಗಳನ್ನು ಹಂಚಿಕೊಂಡರು.
ನಾನು ನನ್ನದು ಎಂಬುದನ್ನು ಮರೆತು ದೇಶ, ಕಾನೂನು ಮೊದಲು ಎನ್ನುವ ಮನೋಭಾವವನ್ನು ನಾಗರಿಕ ಸಮಾಜ ಬೆಳೆಸಿಕೊಳ್ಳಬೇಕು. ಈ ದೇಶದಲ್ಲಿ ಯಾರನ್ನಾದರೂ ಸೋಲಿಸಬಹುದು, ನೋಯಿಸಬಹುದು. ಆದರೆ ಸೋಲಿನಲ್ಲಿಯೂ ನಗುತ್ತಾ ದೇಶಕ್ಕಾಗಿ ನಿಲ್ಲುವ ಸೈನಿಕನ ಮನೋಬಲವನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎನ್ನುತ್ತಾ ಕನಿಷ್ಠ 10 ವಿದ್ಯಾರ್ಥಿಗಳಾದರು ಸೈನಿಕ ಸ್ಥಾನಕ್ಕೆ ಸೇರಬೇಕೆಂದು ಕರೆ ನೀಡಿದರು.
ಇನ್ನೋರ್ವ ಅತಿಥಿ ನಮ್ಮ ಶಾಲೆಯ ನಿಕಟ ಪೂರ್ವ ಮುಖ್ಯೋಪಾಧ್ಯಾಯರಾದ ಲಯನ್ ಬಿ ಸೀತಾರಾಮ್ ಭಟ್ ಮಾತನಾಡಿ ಕಾರ್ಗಿಲ್ ಯುದ್ಧ ನಡೆಯಲು ಕಾರಣವಾದ ಅಂಶಗಳನ್ನು ತಿಳಿಸಿದರು. ಕಾರ್ಗಿಲ್ ಯುದ್ಧವು ನಮಗೆ ಹಲವಾರು ಪಾಠಗಳನ್ನು ಕಲಿಸಿದೆ. ದೇಶದ ರಕ್ಷಣೆಗೆ ನಾವೆಲ್ಲರೂ ಸದಾ ಜಾಗೃತ ಮನೋಭಾವದಿಂದ ಇರಬೇಕಾಗಿರುವುದನ್ನು ತೋರಿಸಿಕೊಟ್ಟಿರುವುದು ಎಂದು ತಿಳಿಸಿದರು.
ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಲಯನ್ ಆನಂದ್ ಆಚಾರ್ಯ, ಲಯನ್ ಸತೀಶ್ ಪ್ರಭು, ಮುಖ್ಯ ಶಿಕ್ಷಕ ಗೌರವ ಆರ್ ಕೆ ಉಪಸ್ಥಿತರಿದ್ದರು.
ಕಾರ್ಗಿಲ್ ಯುದ್ಧ ಸ್ಮಾರಕ ಪ್ರತಿಕೃತಿಗೆ ಗಣ್ಯರು ಪುಷ್ಪಾರ್ಚನೆ ಮಾಡುವುದರ ಮೂಲಕ ನಮನಗಳನ್ನು ಸಲ್ಲಿಸಿದರು. ವೀರಯೋಧ ಪ್ರವೀಣ್ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಕುಮಾರಿ ಸಾನ್ವಿ ವಿ ಸ್ವಾಗತಿಸಿ, ಕುಮಾರಿ ಶಾನ್ವಿ ಎಸ್ ನಿರೂಪಿಸಿದರು. ಕುಮಾರಿ ತಾನ್ಯ ವಂದಿಸಿದರು.
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಕುಮಾರಿ ಮನ್ಹಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

