ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ (ರಿ.), ಭಟ್ಕಳ, ಉತ್ತರ ಕನ್ನಡ ವತಿಯಿಂದ ಆಯೋಜಿಸಲಾದ “ಕೆಸರಂಗ್–2” ಕಾರ್ಯಕ್ರಮದಲ್ಲಿ ಕೆಸರುಗದ್ದೆಯ ಮಧ್ಯೆ ವಿವಿಧ ಗ್ರಾಮೀಣ ಕ್ರೀಡೆಗಳು ಅದ್ಧೂರಿಯಾಗಿ ನಡೆಯಿತು. ಯುವಕರು, ಮಹಿಳೆಯರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿ, ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳ ಸೊಬಗನ್ನು ಸಡಗರದಿಂದ ಆಚರಿಸಿದರು.
ಬೆಳಿಗ್ಗೆ ಕೆಸರುಗದ್ದೆಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ‘ಕೆಸರಂಗ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಮಕ್ಕಳು, ಮಹಿಳೆಯರು ಹಾಗೂ ಪುರುಷರು ವಿವಿಧ ಗ್ರಾಮೀಣ ಕ್ರೀಡೆಗಳು ಮತ್ತು ಕೆಸರುಗದ್ದೆಯಲ್ಲಿನ ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ವಿಶೇಷವಾಗಿ ದಂಪತಿಗಳಿಗಾಗಿ ಆಯೋಜಿಸಿದ್ದ ಮನರಂಜನಾ ಸ್ಪರ್ಧೆಗಳು ಪ್ರೇಕ್ಷಕರ ಮನಸೂರೆಗೊಂಡು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕಗಳನ್ನು ವಿತರಿಸಿ ಗೌರವಿಸಲಾಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಿದರು. ಒಟ್ಟಾರೆಯಾಗಿ ‘ಕೆಸರಂಗ್–2’ ಭಟ್ಕಳ ತಾಲೂಕಿನ ವಿಶಿಷ್ಟ ಹಾಗೂ ಮಾದರಿ ಗ್ರಾಮೀಣ ಕ್ರೀಡಾ ಉತ್ಸವವಾಗಿ ಜನಮನ ಸೆಳೆಯಿತು.
ಕಾರ್ಯಕ್ರಮವನ್ನು ಎಂ.ಜಿ.ಎಂ. ಬ್ಯಾಂಕ್‌ನ ಸಂಸ್ಥಾಪಕರಾದ ಈರಪ್ಪ ಗರ್ಡಿಕರ್ ಉದ್ಘಾಟಿಸಿ ಶುಭ ಹಾರೈಸಿದರು.
ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಉಮೇಶ ಸರ್ಪನಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, “ಎರಡನೇ ವರ್ಷದ ‘ಕೆಸರಂಗ್’ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರ ಸಹಕಾರ ಅಮೂಲ್ಯವಾಗಿದೆ. ಸಾವಿರಕ್ಕೂ ಹೆಚ್ಚು ಜನರು ಕೆಸರುಗದ್ದೆಯಲ್ಲಿ ಆಟವಾಡಿ ಸಂಭ್ರಮಿಸಿರುವುದು ನಮಗೆ ಸಂತಸ ತಂದಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೈಭವದಿಂದ ಈ ಉತ್ಸವವನ್ನು ಆಯೋಜಿಸಲಾಗುವುದು” ಎಂದು ಹೇಳಿದರು.
ಸಂಸ್ಥಾಪಕ ಅಧ್ಯಕ್ಷ ವಾಸು ನಾಯ್ಕ ಮಾತನಾಡಿ, “ಕೆಸರುಗದ್ದೆ ಕ್ರೀಡೋತ್ಸವವು ನಮ್ಮ ಗ್ರಾಮೀಣ ಕ್ರೀಡಾ ಸಂಸ್ಕೃತಿಯನ್ನು ಮರುಜೀವಂತಗೊಳಿಸುವ ಪ್ರಯತ್ನವಾಗಿದೆ. ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಸಾಂಪ್ರದಾಯಿಕ ಆಟಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀನಾರಾಯಣ ನಾಯ್ಕ, ನಾರಾಯಣ ನಾಯ್ಕ, ಮೋಹನ್ ನಾಯ್ಕ, ಸತೀಶ ನಾಯ್ಕ, ನಾಗರಾಜ ನಾಯ್ಕ, ಮಂಜುನಾಥ ಗೊಂಡ ಹಾಗೂ ಮಂಜುನಾಥ ಕರಾವಳಿ ಉಪಸ್ಥಿತರಿದ್ದರು.
ಉಮೇಶ ಸರ್ಪನಕಟ್ಟೆ ಸ್ವಾಗತಿಸಿದರು,ಇರ್ಫಾನ್ ಭಟ್ಕಳ ಹಾಗೂ ಕಿರಣ್ ಬಿಜೂರು ಕಾರ್ಯಕ್ರಮ ನಿರೂಪಿಸಿದರು. ರಾಜೇಶ ನಾಯ್ಕ ವಂದಿಸಿದರು.

