ಟೈಮಿಂಗ್ಸ್ ಗಲಾಟೆ – ನಾಲ್ವರ ಬಂಧನ, ಎರಡು ಖಾಸಗಿ ಬಸ್‌ಗಳು ಜಪ್ತಿ

0
26

ಉಡುಪಿ: ಬಸ್ ಸಮಯದ (ಟೈಮಿಂಗ್ಸ್) ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಚಾಲಕರು ಹಾಗೂ ಕಂಡಕ್ಟರ್‌ಗಳು ಪರಸ್ಪರ ಜಗಳವಾಡಿ, ಸಾರ್ವಜನಿಕ ಶಾಂತಿಗೆ ಭಂಗ ತಂದ ಘಟನೆ ಕಾಪು ಪಡು ಗ್ರಾಮದ ಹೊಸ ಮಾರಿಗುಡಿ ಅಂಡರ್ ಪಾಸ್ ಬಳಿಯ ಬಸ್ ನಿಲ್ದಾಣದ ಎದುರು ನಡೆದಿದೆ.

ಸೋಮವಾರ ಬೆಳಿಗ್ಗೆ ಖಾಸಗಿ ಬಸ್‌ಗಳ ಸಿಬ್ಬಂದಿ ನಡುವೆ ಈ ಗಲಾಟೆ ಸಂಭವಿಸಿದೆ. ಬಸ್ ಟೈಮಿಂಗ್ಸ್ ವಿಚಾರವಾಗಿ ಆಕ್ರೋಶಗೊಂಡ ಎರಡೂ ಬಸ್‌ಗಳ ಚಾಲಕರು ಪರಸ್ಪರ ಬಸ್‌ಗಳನ್ನು ತಾಗಿಸಿ ಅಪಾಯಕಾರಿಯಾಗಿ ಚಲಾಯಿಸಿದ್ದಾರಲ್ಲದೆ, ಬಸ್ ನಿಲ್ದಾಣದಲ್ಲೇ ಕೈ-ಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಜನದಟ್ಟಣೆ ಇರುವ ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ರಾದ್ಧಾಂತದಿಂದಾಗಿ ಪ್ರಯಾಣಿಕರು ಹಾಗೂ ಸ್ಥಳೀಯರು ಆತಂಕಕ್ಕೊಳಗಾಗಿದ್ದರು.

ಪೊಲೀಸ್ ಕ್ರಮ
ಸಾರ್ವಜನಿಕ ನೆಮ್ಮದಿಗೆ ಭಂಗ ತಂದ ಹಿನ್ನೆಲೆಯಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕರಾದ ರಮೇಶ್, ಅಭಿಷೇಕ್ ಹಾಗೂ ಕಂಡಕ್ಟರ್‌ಗಳಾದ ವಿಜಯಕುಮಾರ್, ಹರೀಶ್ ಬಿ. ಹೆಗ್ಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಲಾದ ಎರಡೂ ಖಾಸಗಿ ಬಸ್‌ಗಳನ್ನು ಜಪ್ತಿ ಮಾಡಲಾಗಿದ್ದು, ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.