ಎಪಿಎಂಸಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ : ಕಾರ್ಯದರ್ಶಿ ವಿರುದ್ಧ ಆಕ್ರೋಶ

0
15

ಮಂಗಳೂರು : ಬೈಕಂಪಾಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಸಿ.ಎಚ್. ಮೋಹನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಎಪಿಎಂಸಿಯಲ್ಲಿ ಗ್ರೂಪ್ ‘ಡಿ’ ನೌಕರೆಯಾಗಿ ಕೆಲಸ ನಿರ್ವಹಿಸುತ್ತಿರುವ ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆ, ಕಾರ್ಯದರ್ಶಿ ತನ್ನ ಲೈಂಗಿಕ ಬೇಡಿಕೆಗೆ ಒಪ್ಪಿದರೆ ಮಾಸಿಕ ವೇತನವನ್ನು ₹15,000ರಿಂದ ₹25,000ಕ್ಕೆ ಹೆಚ್ಚಿಸುವುದಾಗಿ ಆಮಿಷವೊಡ್ಡಿದ್ದರು ಎಂದು ಆರೋಪಿಸಿದ್ದಾರೆ. ತನ್ನ ಬೇಡಿಕೆಯನ್ನು ತಿರಸ್ಕರಿಸಿದ ಬಳಿಕ ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೆ ನಿಯೋಜಿಸಿದ್ದು, ಜೊತೆಗೆ “ನನ್ನ ಮಾತಿಗೆ ಒಪ್ಪಿದ್ದರೆ ಸೋಮವಾರ ಹಸಿರು ಸೀರೆ ಧರಿಸಿ ಬಾ” ಎಂದು ಸೂಚನೆ ನೀಡಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ನೇತೃತ್ವದಲ್ಲಿ ಮಹಿಳೆಯರ ತಂಡ ಹಸಿರು ಸೀರೆ ಧರಿಸಿ ‘ಗ್ರೀನ್ ಗ್ಯಾಂಗ್’ ರೂಪದಲ್ಲಿ ಎಪಿಎಂಸಿ ಕಚೇರಿಗೆ ದಿಢೀರ್ ಭೇಟಿ ನೀಡಿ, ಆರೋಪಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಘಟನೆಯ ಮಾಹಿತಿ ಪಡೆದ ಪಣಂಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣದ ಕುರಿತು ತನಿಖೆ ಆರಂಭಿಸಿರುವ ಪೊಲೀಸರು, ತನಿಖೆ ಪೂರ್ಣಗೊಳ್ಳುವವರೆಗೆ ಸಂತ್ರಸ್ತೆಗೆ ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಆರೋಪಗಳ ಸತ್ಯಾಸತ್ಯತೆ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ.