“ತುಳು ನಾಡಗೀತೆ ದಿನ : ಕಟೀಲು ಪದವಿ ಕಾಲೇಜಿನಲ್ಲಿ ಮೊಳಗಿದ ತುಳುನಾಡಿನ ಹೆಮ್ಮೆಯ ಗೀತೆ”

0
184

ಕಟೀಲು : ಆಟಿ 12ರ (ಜುಲೈ 28) ಅಂಗವಾಗಿ ಆಚರಿಸಲಾದ “ತುಳು ನಾಡಗೀತೆ ದಿನ”ದ ಪ್ರಯುಕ್ತ ಶ್ರೀ ದರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲಿನಲ್ಲಿ ವಿದ್ಯಾರ್ಥಿಗಳು “ಜಯ ಜಯ ಜಯ ತುಳುವ ಸೀಮೆದ ಅಪ್ಪೆ ನಾಡ್” ಎಂಬ ತುಳು ನಾಡಗೀತೆಯನ್ನು ಸಮೂಹವಾಗಿ ಹಾಡುವ ಮೂಲಕ ತುಳುನಾಡಿನ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ನಾಡಾಭಿಮಾನಕ್ಕೆ ಗೌರವ ಸಲ್ಲಿಸಿದರು.

1899ರಲ್ಲಿ ಕವಿ “ಮೋನಪ್ಪ ತಿಂಗಳಾಯ” ಅವರಿಂದ ರಚಿತವಾದ ಈ ಅಮರ ನಾಡಗೀತೆ 125 ವರ್ಷಗಳ ಐತಿಹಾಸಿಕ ಪಯಣವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ಕಾಲೇಜಿನಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತುಳು ನಾಡಗೀತೆಯನ್ನು ಆಲಿಸುವ ಮೂಲಕ ಈ ವಿಶೇಷ ದಿನಕ್ಕೆ ಗೌರವ ಸಲ್ಲಿಸಿದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ಪೂಜಾ ಯು. ಕಾಂಚನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಈ ಕಾರ‍್ಯಕ್ರಮವು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿಮಾನ ಹಾಗೂ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಸಾಕ್ಷಿಯಾಯಿತು.

ತುಳು ನಾಡಗೀತೆ ಕೇವಲ ಒಂದು ಗೀತೆಯಲ್ಲ; ಅದು ತುಳುನಾಡಿನ ಅಸ್ತಿತ್ವ, ಆತ್ಮಗೌರವ, ಐಕ್ಯತೆ ಮತ್ತು ನಾಡಿನ ಮೇಲಿನ ಪ್ರೀತಿಯ ಪ್ರತೀಕವಾಗಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ನಾಡಗೀತೆಯ ಗಾಯನವು ಕಾರ‍್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.