ಆಗಸ್ಟ್ 1ರಂದು ಜಾಣಗೆರೆ ವೆಂಕಟರಾಮಯ್ಯ ಸಮಾಲೋಚನಾ ಸಭೆ

0
10

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪತ್ರಕರ್ತ, ಸಾಹಿತಿ ಹಾಗೂ ನಾಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ನಿರ್ಧರಿಸಿದ್ದು, ಈ ಕುರಿತು ಸಮಾಲೋಚನಾ ಸಭೆಯನ್ನು ಆಗಸ್ಟ್‌ 1ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಗಾಂಧಿ ಭವನ, ಕುಮಾರಪಾರ್ಕ್ ಪೂರ್ವದಲ್ಲಿ ಆಗಸ್ಟ್‌ 1 (ಶನಿವಾರ) ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಸಭೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಸದಸ್ಯರು, ಸಾಹಿತಿಗಳು, ಚಿಂತಕರು ಹಾಗೂ ಹಿತೈಷಿಗಳನ್ನು ಆಹ್ವಾನಿಸಲಾಗಿದೆ.

ಜಾಣಗೆರೆ ವೆಂಕಟರಾಮಯ್ಯ ಅವರು ಪ್ರಕಟಿಸಿರುವ ಆಹ್ವಾನದಲ್ಲಿ, ‘ಕನ್ನಡ ನಾಡು-ನುಡಿ ಜಾಗೃತಿ ಸಮಿತಿ’, ‘ಸಮಾನ ಮನಸ್ಕರ ವೇದಿಕೆ’ ಹಾಗೂ ‘ಜಾಗೃತ ನಾಗರಿಕರು–ಕರ್ನಾಟಕ’ ಸಂಘಟನೆಗಳ ಮೂಲಕ ನಡೆಸಿದ ‘ದುರಾಡಳಿತ ತಪ್ಪಿಸಿ–ಕಸಾಪ ಉಳಿಸಿ’ ಹೋರಾಟವು ಒಂದು ಹಂತದ ಯಶಸ್ಸು ಕಂಡಿರುವುದಾಗಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಕಾಯಕಲ್ಪ ನೀಡುವ ಉದ್ದೇಶದಿಂದ ಹಿರಿಯ ಸಾಹಿತಿಗಳು, ಚಿಂತಕರು ಹಾಗೂ ಕಲಾವಿದರು ತಮ್ಮನ್ನು ಕಸಾಪ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯಾಗಿ ಬೆಂಬಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರ ಸಂಪೂರ್ಣ ಸಹಕಾರದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೀರ್ಮಾನಿಸಿದ್ದು, ಈ ಸಂಬಂಧ ರಾಜ್ಯದ ವಿವಿಧ ಭಾಗಗಳಲ್ಲಿರುವ ಸದಸ್ಯರು ಮತ್ತು ಹಿತೈಷಿಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನ ಪಡೆಯಲು ಸಭೆ ಕರೆಯಲಾಗಿದೆ.

ಸುಮಾರು ಐದು ದಶಕಗಳಿಂದ ನಾಡಪರ ಹೋರಾಟ, ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯನ್ನು ಉಲ್ಲೇಖಿಸಿರುವ ಜಾಣಗೆರೆ ವೆಂಕಟರಾಮಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿ ಹಾಗೂ ಬಲವರ್ಧನೆಗಾಗಿ ಎಲ್ಲ ಸದಸ್ಯರು ಸಭೆಗೆ ಆಗಮಿಸಿ ತಮ್ಮ ಅಮೂಲ್ಯ ಸಲಹೆ ಮತ್ತು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.