ತುಳುವಿಗೊಂದು ರಂಗಾಯಣ ಬೇಕು: ವಿಜಯಕುಮಾರ್ ಕೊಡಿಯಾಲಬೈಲ್

0
6

ಮಂಗಳೂರು : ನೀನಾಸಂ, ರಂಗಾಯಣ ತರಬೇತಿ ಕೇಂದ್ರಗಳಂತೆ ತುಳು ರಂಗಭೂಮಿಗೂ ತರಬೇತಿ ಕೇಂದ್ರದ ಅಗತ್ಯವಿದೆ. ಹೊಸ ಕಲಾವಿದರು ಈ ಕ್ಷೇತ್ರಕ್ಕೆ ಪರಿಚಯವಾಗಬೇಕಿದೆ. ಇತ್ತೀಚೆಗೆ ಸ್ಥಳೀಯ ಟಿವಿ ಶೋಗಳು ಈ ರೀತಿಯ ಕೆಲಸಕ್ಕೆ ತೊಡಗಿವೆ.ಸರಕಾರ ತುಳುವಿಗೊಂದು ರಂಗಾಯಣ ಆರಂಭಿಸಬೇಕು ಎಂದು ತುಳು ನಾಟಕ ಮತ್ತು ಸಿನೆಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ತಿಳಿಸಿದ್ದಾರೆ.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ವತಿಯಿಂದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ತುಳು ವಿಭಾಗ ಮತ್ತು ಕನ್ನಡ ವಿಭಾಗದ ಸಹಕಾರದಲ್ಲಿ ವಿಶ್ವವಿದ್ಯಾಲಯದ ಲ್ಲಿ ನಡೆದ ‘ಪ್ರಚಾರೋಪನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುಳು ರಂಗಭೂಮಿ ಯಶಸ್ವಿಯಾಗಲು ಮುಖ್ಯ ಕಾರಣ ಈ ಮಣ್ಣಿನ ಸತ್ವ , ಜನಪದೀಯ ಕತೆಗಳು. ತುಳು ನಾಟಕಗಳನ್ನು ಏಕಕಾಲಕ್ಕೆ 20,000 ಪ್ರೇಕ್ಷಕರು ವೀಕ್ಷಿಸಿದಂತಹ ದಾಖಲೆಗಳಿವೆ. ತುಳು ರಂಗಭೂಮಿಗೆ ಶ್ರೀಮಂತ, ಮಧ್ಯಮ ಮತ್ತು ಬಡ ವರ್ಗ ಹೀಗೆ ಎಲ್ಲಾ ರೀತಿಯ ಕಲಾಭಿಮಾನಿಗಳಿದ್ದಾರೆ. ಇದು ನಮ್ಮ ರಂಗಭೂಮಿಯ ವಿಶೇಷತೆ ಎಂದ ಅವರು, ಹಿಂದೆ ಗದ್ದೆಗಳಲ್ಲಿ ಊರಿನ ಸಂಘ ಸಂಸ್ಥೆಗಳ ಮೂಲಕ ನಾಟಕ ಗಳು ನಡೆಯುತ್ತಿದ್ದವು ಎಂದು ನೆನಪಿಸಿ ತುಳು ರಂಗಭೂಮಿ ಬೆಳೆದು ಬಂದ ಬಗೆ, ಅದರ ವೈಶಿಷ್ಟ್ಯಗಳನ್ನು ವಿವರಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ಉದ್ಘಾಟಿಸಿ, ಮಾಧವ ತಿಂಗಳಾಯರ ಜನಮರ್ಲ್ ನಾಟಕದಿಂದ ತುಳು ರಂಗಭೂಮಿಯ ಪಯಣ ಆರಂಭವಾಗಿದ್ದು ಇಂದು ಅತೀ ಹೆಚ್ವು ಪ್ರೇಕ್ಷಕರನ್ನು ಹೊಂದಿರುವ ಕ್ಷೇತ್ರವಾಗಿದೆ. ಸಮಾಜದ ಕೆಲವು ನ್ಯೂನ್ಯತೆಗಳ ವಿರುದ್ಧ, ಅದರ ಪರಿಣಾಮಗಳ ಸಂದೇಶವನ್ನು ಹಂಚುವ ಉದ್ದೇಶ ತುಳು ರಂಗಭೂಮಿಯ ಆರಂಭದಲ್ಲಿ ಇತ್ತು ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ನ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನದ ಸಹಾಯಕ ಡೀನ್ ಡಾ. ದಿನೇಶ್ ನಾಯಕ್, ತುಳು ನಾಟಕಗಳಲ್ಲಿ ಬರುವ ಹಾಸ್ಯಗಳಲ್ಲೂ ಸಮಾಜದ ಗಂಭೀರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ. ಪ್ರೇಕ್ಷಕರ ಗಳಿಕೆಯೇ ತುಳು ನಾಟಕಗಳ ಶಕ್ತಿ ಎಂದರು. ಹೆಸರಾಂತ ಜಾದೂಗಾರರಾದ ಕುದ್ರೋಳಿ ಗಣೇಶ್, ತುಳು ವಿಭಾಗದ ಉಪನ್ಯಾಸಕಿ ಪ್ರಶಾಂತಿ ಬಿ. ಶೆಟ್ಟಿ ಇರುವೈಲು ಉಪಸ್ಥಿತರಿದ್ದರು. ತುಳು ಪೀಠದ ಪ್ರಸಾದ್ ಅಂಚನ್ ವಂದಿಸಿದರು. ಕನ್ನಡ ಎಂ.ಎ. ವಿದ್ಯಾರ್ಥಿನಿ ಶ್ರುತಿ ನಿರೂಪಿಸಿದರು.