ಆಗಸ್ಟ್ 2ರ ಪೊಲೀಸ್ ಪರೀಕ್ಷೆ ವೇಳಾಪಟ್ಟಿಯಲ್ಲಿ ಕೆಇಎ ಮಹತ್ವದ ಬದಲಾವಣೆ

0
19

ಬೆಂಗಳೂರು : ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗಾಗಿ ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಯ ಸಮಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬದಲಿಸಿದೆ.

ಈ ಮೊದಲು ಮಧ್ಯಾಹ್ನ ನಡೆಯಬೇಕಿದ್ದ ಪರೀಕ್ಷೆಯನ್ನು ಇದೀಗ ಸಂಜೆ 4 ಗಂಟೆಗೆ ಆರಂಭಿಸಲು ಕೆಇಎ ನಿರ್ಧರಿಸಿದೆ.

ಕೆಇಎ ನೀಡಿರುವ ಮಾಹಿತಿಯಂತೆ, ರಾಜ್ಯದ ಹಲವು ಅಭ್ಯರ್ಥಿಗಳಿಗೆ ಬೆಳಗಿನ ಅವಧಿಯಲ್ಲಿ ಒಂದು ಪರೀಕ್ಷಾ ಕೇಂದ್ರ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಗಿತ್ತು. ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ನಡುವಿನ ಅಂತರ ಹೆಚ್ಚು ಇರುವುದರಿಂದ ನಿಗದಿತ ಸಮಯದಲ್ಲಿ ಎರಡನೇ ಕೇಂದ್ರ ತಲುಪಲು ತೊಂದರೆ ಉಂಟಾಗುವ ಸಾಧ್ಯತೆ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ, ಬೆಳಗಿನ ಪರೀಕ್ಷೆ ಮುಗಿದ ಬಳಿಕ ದೂರದ ಪ್ರದೇಶದಲ್ಲಿರುವ ಮತ್ತೊಂದು ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಸುಲಭವಾಗಿ ತಲುಪಲು ಹಾಗೂ ಅವರ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಪರೀಕ್ಷೆಯ ಆರಂಭದ ಸಮಯವನ್ನು ಒಂದೂವರೆ ಗಂಟೆ ಮುಂದೂಡಲಾಗಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

ಪರೀಕ್ಷಾರ್ಥಿಗಳು ಪರಿಷ್ಕೃತ ವೇಳಾಪಟ್ಟಿಯಂತೆ ಆಗಸ್ಟ್ 2ರಂದು ಸಂಜೆ 4 ಗಂಟೆಗೆ ಪರೀಕ್ಷೆಗೆ ಹಾಜರಾಗುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.