ಉಡುಪಿ : ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ತೀವ್ರ ಗಲಾಟೆ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರನ್ನು ಪಿಸ್ತೂಲ್‌ನಿಂದ ಶೂಟ್ ಮಾಡಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಕುಂದಾಪುರದ ಚರ್ಚ್ ರಸ್ತೆಯಲ್ಲಿ ಶುಕ್ರವಾರ (ಜುಲೈ 31) ಮುಂಜಾನೆ ನಡೆದಿದೆ.
ಐವನ್ ಕೊಲೆಯಾದ ದುರ್ದೈವಿಯಾಗಿದ್ದು, ಈ ಕೃತ್ಯ ಎಸಗಿದ ಆರೋಪಿ ಡೆರಿಕ್ ಕ್ರಾಸ್ತಾ ಗನ್‌ನಿಂದ ಶೂಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯ ವಿವರ: ಜುಲೈ 30ರಂದು ರಾತ್ರಿ 11:45ರ ಸುಮಾರಿಗೆ ಡೆರಿಕ್ ಎಂಬಾತ ಐವನ್‌ಗೆ ಕರೆ ಮಾಡಿ, ‘ಚಟ್ಲಿ ಕೊಡುವ ವಿಚಾರದಲ್ಲಿ ಬರಬೇಕಾಗಿದ್ದ ಹಣವನ್ನು ಮಧ್ಯಸ್ಥಿಕೆ ವಹಿಸಿ ಕೊಡಿಸುತ್ತೇನೆ’ ಎಂದು ಹೇಳಿದ್ದ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಮಾತು ಬೆಳೆದು ಜೋರು ಜೋರಾಗಿ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದಾಗ “ಧಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ” ಎಂದು ಡೆರಿಕ್ ಸವಾಲು ಹಾಕಿದ್ದ ಎನ್ನಲಾಗಿದೆ.
ಬಳಿಕ ಜುಲೈ 31ರಂದು ರಾತ್ರಿ 1:30ರ ಸುಮಾರಿಗೆ ಡೆರಿಕ್, ಐವನ್‌ಗೆ ತನ್ನ ಲೊಕೇಶನ್ ಕಳುಹಿಸಿದ್ದಾನೆ. ಲೊಕೇಶನ್ ಆಧರಿಸಿ ಐವನ್, ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಹೋಲಿ ರೋಸಾರಿಯ ಚರ್ಚ್ ಎದುರಿನ ಕಾಂಕ್ರೀಟ್ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದರು.
ಕಾರಿನಲ್ಲಿ ಬಂದು ಗನ್‌ನಿಂದ ಶೂಟ್!
ಮುಂಜಾನೆ ಸುಮಾರು 3:15ರ ವೇಳೆಗೆ ಕಪ್ಪು ಹಾಗೂ ಕೆಂಪು ಬಣ್ಣದ ಥಾರ್ ಕಾರಿನಲ್ಲಿ ಬಂದ ಆರೋಪಿ ಡೆರಿಕ್, ಐವನ್ ಕಾರಿನ ಎದುರು ತಂದಿಳಿಸಿದ. ಐವನ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ, ತನ್ನ ಕೈಯಲ್ಲಿದ್ದ ಗನ್‌ನಿಂದ ಐವನ್ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿದ್ದಾನೆ. ಬಳಿಕ ರಿವರ್ಸ್‌ನಲ್ಲಿ ಕಾರು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಗುಂಡೇಟಿನಿಂದ ಸೊಂಟ ಹಾಗೂ ಕಾಲಿನ ಭಾಗಕ್ಕೆ ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಐವನ್ ರಸ್ತೆಯಲ್ಲೇ ಕುಸಿದು ಬಿದ್ದು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಹಣಕಾಸಿನ ಹಾಗೂ ಇತರ ವ್ಯವಹಾರಗಳಲ್ಲಿದ್ದ ಹಳೆಯ ಮನಸ್ತಾಪವೇ ಈ ಭೀಕರ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಡೆರಿಕ್ ಕ್ರಾಸ್ತಾನ ಬಂಧನಕ್ಕಾಗಿ ಪೊಲೀಸರು 3 ವಿಶೇಷ ತಂಡಗಳನ್ನು ರಚಿಸಿದ್ದು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

