ಮೂರು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧ ಅಡಿಕೆ ತೋಟದ ಚರಂಡಿಯಲ್ಲಿ ಜೀವಂತ ಪತ್ತೆ

0
41

ವಿಟ್ಲ : ಕಳೆದ ಮೂರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ಧರೊಬ್ಬರು ಶುಕ್ರವಾರ ಬೆಳಿಗ್ಗೆ ಅಡಿಕೆ ತೋಟದ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವಿಟ್ಲ ಪಡ್ನರು ಗ್ರಾಮದಲ್ಲಿ ನಡೆದಿದೆ. ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ವೃದ್ಧರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಕ್ಷಿಸಲ್ಪಟ್ಟವರು ವಿಟ್ಲ ಪಡ್ನರು ಗ್ರಾಮದ ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂದು ಗುರುತಿಸಲಾಗಿದೆ. ಕಳೆದ ಮಂಗಳವಾರದಿಂದ ಅವರು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಲಾಗಿದ್ದು, ಕೆರೆ, ಹಳ್ಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.

ಇದಾದ ಬಳಿಕ ಶುಕ್ರವಾರ ಬೆಳಿಗ್ಗೆ ಸಂಬಂಧಿಕರು, ಕೋಡಪದವು ಮಾರುತಿ ಫ್ರೆಂಡ್ಸ್ ತಂಡ ಹಾಗೂ ಸಾರ್ವಜನಿಕರು ಸೇರಿ ಮತ್ತೊಮ್ಮೆ ವ್ಯಾಪಕ ಶೋಧ ಕಾರ್ಯ ಆರಂಭಿಸಿದರು. ಈ ಕಾರ್ಯಾಚರಣೆಗೆ ತಂಡದ ಮನೋಹರ, ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಮಾವೆ, ಮಾಣಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರವಿಂದ ರೈ, ರೈತ ಮೋರ್ಚಾ ಅಧ್ಯಕ್ಷ ಉಮೇಶ್ ಶೆಟ್ಟಿ, ಸೀತಾರಾಮ ಗೌಡ, ಮುರಳಿ ಭಟ್ ಹಾಗೂ ಮನೋಹರ ಕುಕ್ಕಿಲ ನೇತೃತ್ವ ವಹಿಸಿದ್ದರು.

ಶೋಧ ಕಾರ್ಯದ ವೇಳೆ ಕುಕ್ಕಿಲದ ಅಡಿಕೆ ತೋಟದ ನೀರು ಹರಿಯುವ ಚರಂಡಿಯಲ್ಲಿ ಗಿರಿಯಪ್ಪ ಸಪಲ್ಯ ಅವರು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿದರು. ಕೂಡಲೇ ಅವರನ್ನು ಹೊರತೆಗೆದು ಪ್ರಾಥಮಿಕ ಚಿಕಿತ್ಸೆ ನೀಡಿ, ವಿಟ್ಲದ ಆಪದ್ಮಾಂಧವ ಮುರಳಿ ವಿಟ್ಲ ಅವರಿಗೆ ಮಾಹಿತಿ ನೀಡಿದರು.

ನಂತರ ಅಂಬುಲೆನ್ಸ್ ಮೂಲಕ ವೃದ್ಧರನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸ್ಥಳೀಯರ ತ್ವರಿತ ಸ್ಪಂದನೆ, ಸ್ವಯಂಸೇವಕರ ನಿರಂತರ ಶೋಧ ಕಾರ್ಯ ಹಾಗೂ ಅಗ್ನಿಶಾಮಕ ದಳದ ಸಹಕಾರದಿಂದ ವೃದ್ಧರನ್ನು ಜೀವಂತವಾಗಿ ಪತ್ತೆಹಚ್ಚಲು ಸಾಧ್ಯವಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.