ಹಿಂದುಳಿದ ವರ್ಗಗಳ ನಿರ್ಲಕ್ಷ್ಯ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಬಿಸಿ ಮೋರ್ಚಾ ಕಿಡಿ

0
44

ತೀರ್ಥಹಳ್ಳಿ : ​ರಾಜ್ಯದಲ್ಲಿನ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಹಿಂದುಳಿದ ವರ್ಗಗಳ ವಿರೋಧಿ ನೀತಿ ಅನುಸರಿಸುತ್ತಿದೆ ಹಾಗೂ ಸಾರ್ವಜನಿಕರಿಗೆ ಸಾಲು ಸಾಲು ಸಂಕಷ್ಟಗಳನ್ನು ತಂದೊಡ್ಡಿದೆ ಎಂದು ತೀರ್ಥಹಳ್ಳಿ ತಾಲೂಕು ಒಬಿಸಿ ಮೋರ್ಚಾ (ಬಿಜೆಪಿ) ತೀವ್ರವಾಗಿ ಆರೋಪಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮೋರ್ಚಾ, ಬಿಜೆಪಿ ಸರ್ಕಾರದ ಅವಧಿಗೂ ಹಾಗೂ ಇಂದಿನ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೂ ಇರುವ ವ್ಯತ್ಯಾಸಗಳನ್ನು ಎತ್ತಿಹಿಡಿದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವರಾಜ ಅರಸು ನಿಗಮದಿಂದ ಸಾಲ ಯೋಜನೆಗೆ ವರ್ಷಕ್ಕೆ 129 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಈ ಸಂಖ್ಯೆ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಹಿಂದೆ ಬಿಜೆಪಿ ಸರ್ಕಾರವು ಬೋರ್‌ವೆಲ್ ಕೊರೆದು, ಟ್ರಾನ್ಸ್‌ಫಾರ್ಮರ್, ಪಂಪ್‌ಸೆಟ್ ಹಾಗೂ 50 ಕಂಬಗಳನ್ನು ಹಾಕಿ ಸಂಪೂರ್ಣ ವಿದ್ಯುತ್ ಸಂಪರ್ಕ ನೀಡುತ್ತಿತ್ತು. ಆದರೆ ಇಂದಿನ ಸರ್ಕಾರ ಕೇವಲ ಬೋರ್‌ವೆಲ್ ಡ್ರಿಲ್ಲಿಂಗ್‌ಗೆ ಮಾತ್ರ ಸೀಮಿತಗೊಳಿಸಿರುವುದರಿಂದ ಹಿಂದುಳಿದ ವರ್ಗದ ಫಲಾನುಭವಿಗಳು ತೊಂದರೆಗೊಳಗಾಗಿದ್ದಾರೆ.

ಹಿಂದಿನ ಬಿಜೆಪಿ ಆಡಳಿತದಲ್ಲಿ ತಾಲೂಕಿನಾದ್ಯಂತ ವಿವಿಧ ಸಮುದಾಯಗಳ ಸಭಾಭವನಗಳಿಗೆ ಲಕ್ಷಾಂತರ ರೂಪಾಯಿ ಮಂಜೂರು ಮಾಡಿ ನಿರ್ಮಿಸಲಾಗಿತ್ತು. ಆದರೆ ಈಗಿನ ಸರ್ಕಾರದಿಂದ ಯಾವುದೇ ಸಮುದಾಯ ಭವನಕ್ಕೂ ಹಣ ಮಂಜೂರಾಗಿಲ್ಲ. ಮನೆ ಕಟ್ಟಿಕೊಂಡಿರುವ ಬಡವರಿಗೆ ಬಿಜೆಪಿ ಅವಧಿಯಲ್ಲಿ ನೂರಾರು ’94ಸಿ’ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಪ್ರಸ್ತುತ ಸರ್ಕಾರ ಬಂದ ಮೇಲೆ ಒಂದೇ ಒಂದು ಹಕ್ಕುಪತ್ರವನ್ನೂ ವಿತರಿಸಿಲ್ಲ.

ತೀರ್ಥಹಳ್ಳಿಯೊಂದರಲ್ಲೇ 3 ಸಾವಿರಕ್ಕೂ ಹೆಚ್ಚು ಜನ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲ ವೇತನದಿಂದ ವಂಚಿತರಾಗಿದ್ದಾರೆ. ಇದಲ್ಲದೆ 1,454 ಬಿ.ಪಿ.ಎಲ್ ಕಾರ್ಡ್‌ಗಳನ್ನು ಎ.ಪಿ.ಎಲ್ ಆಗಿ ಪರಿವರ್ತಿಸಿರುವುದರಿಂದ ಹಿಂದುಳಿದ ಸಮುದಾಯದ ಬಡ ಕುಟುಂಬಗಳಿಗೆ ತೀವ್ರ ತೊಂದರೆಯಾಗಿದೆ.

ಅಲ್ಲದೆ, ಕೆ.ಇ.ಬಿ.ಯಿಂದ ಮನೆ ಸಂಪರ್ಕಕ್ಕೆ (2 ಕಿಲೋವ್ಯಾಟ್‌ಗೆ) ₹28,000 ಮೌಲ್ಯವನ್ನು ನಿಗದಿಪಡಿಸಿ ಬಡ ಕುಟುಂಬಗಳ ಮೇಲೆ ಹೆಚ್ಚಿನ ಹೊರೆ ಹಾಕಲಾಗಿದೆ. ಗ್ರಾಮೀಣ ಭಾಗದ ಮನೆ ಕಂದಾಯ, ನೋಂದಣಿ ಶುಲ್ಕ ಹಾಗೂ ಪರವಾನಗಿ ಚಾರ್ಜ್‌ಗಳನ್ನು ಶೇಕಡಾ 10ರಷ್ಟು ಹೆಚ್ಚಿಸಲಾಗಿದ್ದು, ಸಾಮಾನ್ಯ ಜನರು ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ತೀರ್ಥಹಳ್ಳಿ ತಾಲೂಕು ಒಬಿಸಿ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದೆ.