ಆ. 3: ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ನೀರಾಜನ’ ಭಕ್ತಿ ಸಂಕಲನ ಬಿಡುಗಡೆ

0
6

ಡಾ| ಎಂ.ಮೋಹನ ಆಳ್ವರಿಂದ ಅವಳಿ ಕಾರ್ಯಕ್ರಮಗಳ ಲೋಕಾರ್ಪಣೆ

ಮಂಗಳೂರು : ಅಂತಾರಾಷ್ಟ್ರೀಯ ಆರ್ಯಭಟ ಹಾಗೂ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ತುಳು – ಕನ್ನಡ ಭಕ್ತಿಗೀತೆಗಳ ಸಂಕಲನ ‘ನೀರಾಜನ’ ದೈವ – ದೇವರ ಭಕ್ತಿ ಸುಗಿಪು ಇದೇ 2026 ಆಗಸ್ಟ್ 3 ರಂದು ಸೋಮವಾರ ಸಂಜೆ ಗಂಟೆ 6.30ಕ್ಕೆ ನಗರದಲ್ಲಿ ಬಿಡುಗಡೆಗೊಳ್ಳಲಿದೆ.

ಕರಾವಳಿ ಕರ್ನಾಟಕದ ಪ್ರಪ್ರಥಮ ತುಳು ವಾರ್ತಾ ವಾಹಿನಿ ನಮ್ಮ ಕುಡ್ಲದ ದಿ|ಬಿ.ಪಿ. ಕರ್ಕೆರ ಮತ್ತು ಲಕ್ಷ್ಮೀ ಕರ್ಕೇರ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಉದ್ಘಾಟಿಸುವರು. ಪಾಲೆಮಾರ್ ಸಮೂಹ ಸಂಸ್ಥೆಗಳ ಚೆಯರ್ ಮೇನ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸುವರು.

ಅಹಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ‘ನೀರಾಜನ’ ಭಕ್ತಿ ಸಂಕಲನವನ್ನು ಬಿಡುಗಡೆಗೊಳಿಸುವರು. ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟ ಪೂರ್ವ ಯೋಜನಾ ನಿರ್ದೇಶಕ ಡಾ. ಬಿ. ಶಿವರಾಮ ಶೆಟ್ಟಿ ಕೃತಿ ಪರಿಚಯ ಮಾಡುವರು.

ಪುಸ್ತಕವನ್ನು ಪ್ರಕಟಿಸಿದ ಆಕೃತಿ ಆಶಯ ಪಬ್ಲಿಕೇಷನ್ಸ್ ನ ಕಲ್ಲೂರು ನಾಗೇಶ್, ಕೃತಿಕರ್ತ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

‘ಪುರಾಣ ಲೋಕ’ಕ್ಕೆ ಚಾಲನೆ

ಸಮಾರಂಭದಲ್ಲಿ ‘ನಮ್ಮ ಕುಡ್ಲ ವಾಹಿನಿ’ಯ ವರ್ಷಾಕಾಲದ ವಿಶೇಷ ಕಾರ್ಯಕ್ರಮ ‘ಪುರಾಣ ಲೋಕ’ ಪುರಾಣ ಕಾವ್ಯಗಳ ವಾಚನ – ಪ್ರವಚನ ಸಾಪ್ತಾಹಿಕ ಪ್ರಸಾರಕ್ಕೆ ಡಾ|ಎಂ.ಮೋಹನ ಆಳ್ವ ವಿಧ್ಯುಕ್ತ ಚಾಲನೆ ನೀಡುವರು. ಸಂತ ಕವಿ ಕನಕದಾಸರ ‘ನಳ ಚರಿತ್ರೆ’ ಕಾವ್ಯದ ತುಳು – ಕನ್ನಡ ಆವೃತ್ತಿಗಳನ್ನು ಯಕ್ಷಗಾನ ಭಾಗವತ ದೇವಿಪ್ರಸಾದ ಆಳ್ವ ತಲಪಾಡಿ ಮತ್ತು ಹರಿಕಥಾ ವಿದುಷಿ ಮಂಜುಳಾ ಜಿ. ರಾವ್ ಇರಾ ವಾಚಿಸಲಿದ್ದು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡುವರು.

ಮುಂದಿನ ವಾರದಿಂದ ಪ್ರತಿ ಭಾನುವಾರ ಬೆಳಿಗ್ಗೆ ನಮ್ಮ ಕುಡ್ಲದಲ್ಲಿ ‘ಪುರಾಣ ಲೋಕ’ ಸರಣಿಯ ಅರ್ಧ ತಾಸಿನ ಸಂಚಿಕೆಗಳು ಅನುಕ್ರಮವಾಗಿ ಪ್ರಸಾರವಾಗುವುದಲ್ಲದೆ ವಾರದ ನಡುವೆ ಸಾಂದರ್ಭಿಕ ಮರುಪ್ರಸಾರ ಕಾಣಲಿದೆ ಎಂದು ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ತಿಳಿಸಿದ್ದಾರೆ.