-ಮಂದಾರ ರಾಜೇಶ್ ಭಟ್
ಮುದ್ದೇನಹಳ್ಳಿ (ನಂದಿ ಬೆಟ್ಟದ ಮಡಿಲು): ನಂದಿ ಬೆಟ್ಟದ ಮಡಿಲಲ್ಲಿರುವ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮ ಇಂದು ಮಾನವೀಯತೆ, ನಿಸ್ವಾರ್ಥ ಸೇವೆ ಮತ್ತು ಸಾಮಾಜಿಕ ಬದ್ಧತೆಯ ಪ್ರತೀಕವಾಗಿ ಜಗತ್ತಿನ ಗಮನ ಸೆಳೆಯುತ್ತಿದೆ.

ಭಗವಾನ್ ಸತ್ಯಸಾಯಿ ಬಾಬಾ ಅವರ ಆಶೀರ್ವಾದ, ಮಡಿಯಾಳ ನಾರಾಯಣ ಭಟ್ ಅವರ ಸೇವಾ ಸಂಕಲ್ಪ ಹಾಗೂ ಪ್ರಸ್ತುತ ಸದ್ಗುರು ಮಧುಸೂದನ ಸಾಯಿ ಅವರ ಮಾರ್ಗದರ್ಶನದ ತ್ರಿವೇಣಿ ಸಂಗಮವಾಗಿ ಬೆಳೆದಿರುವ ಈ ಸೇವಾಕ್ಷೇತ್ರ, ಸಮಾಜಮುಖಿ ಕಾರ್ಯಗಳ ಮೂಲಕ ಹೊಸ ಇತಿಹಾಸ ನಿರ್ಮಿಸುತ್ತಿದೆ.
“ಶಿಕ್ಷಣ, ಆರೋಗ್ಯ ಮತ್ತು ಆಹಾರ – ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು ಎಂಬ ಧ್ಯೇಯದೊಂದಿಗೆ ಇಲ್ಲಿ ಎಲ್ಲಾ ಸೇವೆಗಳು ಸಂಪೂರ್ಣ ಉಚಿತವಾಗಿ ಲಭ್ಯವಾಗುತ್ತಿವೆ.
ಚಿಕಿತ್ಸೆಗೆ ಹಣದ ಅಡ್ಡಿಯಿಲ್ಲ, ಹಸಿವಿಗೆ ಸ್ಥಳವಿಲ್ಲ, ಕಣ್ಣೀರಿಗೆ ಅವಕಾಶವಿಲ್ಲ; ಶಿಕ್ಷಣ ಇಲ್ಲಿ ವ್ಯಾಪಾರದ ವಸ್ತುವಲ್ಲ, ಬದುಕು ರೂಪಿಸುವ ಸಾಧನವಾಗಿದೆ.
ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೈದ್ಯಕೀಯ ಕಾಲೇಜು ಮತ್ತು ವಿಶ್ವವಿದ್ಯಾಲಯದವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿರುವ ಸತ್ಯಸಾಯಿ ಗ್ರಾಮ, ಮೌಲ್ಯಾಧಾರಿತ ಶಿಕ್ಷಣದ ಮೂಲಕ ಉತ್ತಮ ನಾಗರಿಕರನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದೆ.
ಆರೋಗ್ಯ ಕ್ಷೇತ್ರದಲ್ಲಿಯೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಸುಮಾರು 20 ಆಸ್ಪತ್ರೆಗಳ ಮೂಲಕ ಹಾಗೂ ವಿದೇಶಗಳಲ್ಲಿಯೂ ಆಸ್ಪತ್ರೆಗಳನ್ನು ಸ್ಥಾಪಿಸಿ, ನಿಸ್ವಾರ್ಥ ವೈದ್ಯಕೀಯ ಸೇವೆಯನ್ನು ವಿಸ್ತರಿಸಿದೆ.
ಭಗವಾನ್ ಸತ್ಯಸಾಯಿ ಬಾಬಾ ಅವರು ನಾಮಕರಣ ಮಾಡಿದ ಈ ಸೇವಾಕ್ಷೇತ್ರ, ಇಂದು ದೇಶದ ಸುಮಾರು ಒಂದು ಕೋಟಿ ಮಕ್ಕಳಿಗೆ ಉಚಿತ ಪೌಷ್ಟಿಕ ಆಹಾರ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಮಡಿಯಾಳ ನಾರಾಯಣ ಭಟ್ ಅವರ ಕನಸನ್ನು ಸಾಕಾರಗೊಳಿಸುವ ಪಯಣದಲ್ಲಿ ಸತ್ಯಸಾಯಿ ಗ್ರಾಮ ಇದೀಗ ತನ್ನ 50ನೇ ವರ್ಷದ ಸೇವಾ ಪಯಣವನ್ನು ಹೆಮ್ಮೆಯಿಂದ ಆಚರಿಸುತ್ತಿದೆ.
ಭಾರತವನ್ನು ಮೀರಿ ಸುಮಾರು 100 ದೇಶಗಳಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ಮಾನವೀಯ ಸೇವಾ ಕಾರ್ಯಕ್ರಮಗಳನ್ನು ವಿಸ್ತರಿಸಿರುವ ಈ ಸಂಸ್ಥೆ, “One World, One Family” (ಒಂದು ವಿಶ್ವ – ಒಂದು ಕುಟುಂಬ) ಎಂಬ ವಿಶ್ವಮಾನವೀಯ ಸಂದೇಶವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ನಿರಂತರವಾಗಿ ಸಾಗುತ್ತಿದೆ.
ಸೇವೆ, ಕರುಣೆ ಮತ್ತು ಸಮಾನತೆಯ ಮೌಲ್ಯಗಳನ್ನು ಬದುಕಿನ ಆದರ್ಶವನ್ನಾಗಿಸಿಕೊಂಡಿರುವ ಸತ್ಯಸಾಯಿ ಗ್ರಾಮ, ಸಮಾಜ ಪರಿವರ್ತನೆಗೆ ನಿಸ್ವಾರ್ಥ ಸೇವೆಯೇ ಶ್ರೇಷ್ಠ ಮಾರ್ಗ ಎಂಬುದನ್ನು ತನ್ನ ಕಾರ್ಯಗಳ ಮೂಲಕ ಸಾರುತ್ತಿದ್ದು, ವಿಶ್ವಕ್ಕೆ ಭಾರತೀಯ ಸಂಸ್ಕೃತಿ ಮತ್ತು ಮಾನವೀಯತೆಯ ಆದರ್ಶ ಮಾದರಿಯಾಗಿ ಬೆಳೆಯುತ್ತಿದೆ.

