-ಮಂದಾರ ರಾಜೇಶ್
ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿಯ ಗ್ರಾಮಭಾರತಿ ಟ್ರಸ್ಟ್ (ರಿ.), ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆ, ಕಾರಣಗಿರಿ ರಾಷ್ಟ್ರೋತ್ಥಾನ ಬಳಗ ಹಾಗೂ ಹಾದಿಗಲ್ಲುವಿನ ಶ್ರೀ ವಾದಿರಾಜ ಸಂಸ್ಕೃತಿ ಸಂವರ್ಧನಾ ಸಭೆಯ ಜಂಟಿ ಆಶ್ರಯದಲ್ಲಿ ಪ್ರಥಮ ಸುದ್ದಿವಾಹಕ ನಾರದರ ಸಂಸ್ಮರಣಾರ್ಥ ನೀಡಲಾಗುವ ಪ್ರತಿಷ್ಠಿತ ‘ನಾರದ ಪುರಸ್ಕಾರ’ ಪ್ರದಾನ ಸಮಾರಂಭವು ಆಗಸ್ಟ್ 4ರ ಮಂಗಳವಾರ ಸಂಜೆ 4:00 ಗಂಟೆಗೆ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ನಡೆಯಲಿದೆ.
ಮಾಧ್ಯಮ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಒಂಬತ್ತು ಗಣ್ಯರಿಗೆ ಈ ಬಾರಿಯ ‘ನಾರದ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ
ಎಂದು ಗ್ರಾಮಭಾರತಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆಯ ಸಂಪಾದಕ ಹನಿಯ ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಗ್ರ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಬಾರಿಯ ‘ನಾರದ ಪುರಸ್ಕಾರ’ಕ್ಕೆ ಕನ್ನಡ ನ್ಯೂಸ್ ಅಂತರ್ಜಾಲ ಪತ್ರಿಕೆಯ ಸಂಪಾದಕ ರಘುಪತಿ ಯಾಜಿ, ಪರಿಸರ ಪತ್ರಕರ್ತ ರಘುನಂದನ್ ಭಟ್ ನರೂರ, ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಸುಧೀಂದ್ರ, ಹಿರಿಯ ಪತ್ರಿಕಾ ಪ್ರತಿನಿಧಿ ಗಣಪತಿ ಪಂಡಿತ್, ಹೊಸದಿಗಂತದ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ, ಟಿ.ವಿ. ವರದಿಗಾರ್ತಿ ಶೈಲಜಾ ಗೊರ್ನಮನೆ, ಶಿವಮೊಗ್ಗ ಹೊಸದಿಗಂತದ ಸಂಪಾದಕ ವಾದಿರಾಜ್ ಕಮರೂರು, ಶ್ರೀಧರ ಸಂದೇಶದ ಸಂಪಾದಕ ಗಜಾನನ ಭಟ್ಟ ರೇವಣಕಟ್ಟ ಹಾಗೂ ಅಂಕಣಕಾರ ಮತ್ತು ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮ ರಂಗದಲ್ಲಿ ಗಮನಾರ್ಹ ಕೊಡುಗೆ ನೀಡಿದ ಈ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಆಹ್ವಾನವಿದೆ.

