ಕೆದಿಲ ಗಾಂಧಿನಗರದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ

0
6

ಕೆದಿಲ : ಶ್ರೀ ಉಳ್ಳಾಕ್ಲೂ ಧೂಮಾವತಿ ಮಲರಾಯ ದೈವಸ್ಥಾನದ ಆಶೀರ್ವಾದದೊಂದಿಗೆ, ಚರಿತ ಚಾರಿಟೇಬಲ್ ಟ್ರಸ್ಟ್, ಮಂಗಳೂರು ವತಿಯಿಂದ ಕೆದಿಲ ಗಾಂಧಿನಗರದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.

ಕಳೆದ ಹಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಸಂಕಷ್ಟದಲ್ಲಿರುವ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡುತ್ತಾ ಬರುತ್ತಿರುವ ಟ್ರಸ್ಟ್, ಈ ಬಾರಿಯೂ ಕೆದಿಲ ಗ್ರಾಮದ ಅರ್ಹ ಫಲಾನುಭವಿಗಳಿಗೆ ಧನಸಹಾಯ ವಿತರಿಸಿ ಮಾನವೀಯ ಸೇವೆಯನ್ನು ಮುಂದುವರಿಸಿದೆ.

ಕಾರ್ಯಕ್ರಮದಲ್ಲಿ ಚರಿತ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ವೆಂಕಟೇಶ್ವರ ಪ್ರಸಾದ್ ಏತಡ್ಕ ಮತ್ತು ಕುಟುಂಬದವರು, ಟ್ರಸ್ಟ್ ಸದಸ್ಯರಾದ ಬಂಗಾರಡ್ಕ ರಾಧಾಕೃಷ್ಣ ಭಟ್ ದಂಪತಿ, ಡಾ. ಕೇಶವ ಪ್ರಸನ್ನ (ಯೆನೇಪೋಯ ಆಸ್ಪತ್ರೆ, ಮಂಗಳೂರು) ಹಾಗೂ ಗಣರಾಜ ಭಟ್ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಫಲಾನುಭವಿಗಳಿಗೆ ಸಹಾಯಧನ ವಿತರಿಸಿದರು.

ಈ ಟ್ರಸ್ಟ್‌ನ ಸೇವೆಯನ್ನು ಕೆದಿಲ ಗ್ರಾಮಕ್ಕೆ ಪರಿಚಯಿಸಿದ ಜಯಂತಿ ಧನಂಜಯ ಶೆಟ್ಟಿ ಮಿತ್ತಿಲ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿ ಅಭಿನಂದಿಸಲಾಯಿತು. ಮುಂದಿನ ದಿನಗಳಲ್ಲಿಯೂ ಗ್ರಾಮದ ಹೆಚ್ಚಿನ ವಿದ್ಯಾರ್ಥಿಗಳು ಟ್ರಸ್ಟ್‌ನ ನೆರವಿನ ಸೌಲಭ್ಯ ಪಡೆಯುವಂತಾಗಲಿ ಎಂಬ ಆಶಯ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಹಾಗೂ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ವಳಂಗಜೆ, ಶ್ರೀ ದೇವಿ ಭಜನಾ ಮಂಡಳಿಯ ಅಧ್ಯಕ್ಷ ವಿಶ್ವನಾಥ ಗೌಡ ಗಾಂಧಿನಗರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕಲ್ಪಿಸಿದ ಒ. ಶ್ಯಾಮ ಪ್ರಸಾದ್ ಅವರಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಆಯೋಜಕರು ಕೃತಜ್ಞತೆ ಸಲ್ಲಿಸಿದರು.