ಕಾಸರಗೋಡು : ಕನ್ನಡ ಭವನ ಕಾಸರಗೋಡು ವತಿಯಿಂದ ಇತ್ತೀಚೆಗೆ ನಡೆದ ರಜತ ಸಂಭ್ರಮ ಹಾಗೂ ಗಡಿನಾಡು ಕನ್ನಡ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅನಿವಾರ್ಯ ಕಾರಣಗಳಿಂದ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗದ ಸಾಧಕರಿಗೆ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಯಿತು. ಇದೇ ಸಂದರ್ಭದಲ್ಲಿ “ಭರವಸೆಯ ಬೆಳಕು – ಸ್ಟೂಡೆಂಟ್ ಅಚೀವ್ಮೆಂಟ್ ಅವಾರ್ಡ್”, “ಭರವಸೆಯ ಶಿಕ್ಷಣ ರತ್ನ – ಟೀಚರ್ಸ್ ಅಚೀವ್ಮೆಂಟ್ ಅವಾರ್ಡ್” ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.
ಕಾರ್ಯಕ್ರಮವನ್ನು ಪ್ರದೀಪ್ ಬೇಕಲ್ ಉದ್ಘಾಟಿಸಿ ಮಾತನಾಡಿ, ಕನ್ನಡ ಭವನವು ಹಲವು ವರ್ಷಗಳಿಂದ ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ಅವಿರತವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ಕೊರೊನಾ ಸಂಕಷ್ಟದ ಅವಧಿಯಲ್ಲಿಯೂ ಆನ್‌ಲೈನ್ ಮೂಲಕ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿ ಭಾಷಾ ಸೇವೆಯನ್ನು ನಿರಂತರವಾಗಿ ಮುಂದುವರಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 900ಕ್ಕೂ ಅಧಿಕ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಕನ್ನಡ ಭವನದ ಹೆಮ್ಮೆಯ ಸಾಧನೆ ಎಂದು ಅವರು ಹೇಳಿದರು. ಗಡಿನಾಡಿನಲ್ಲಿ ಕನ್ನಡದ ಅಸ್ತಿತ್ವವನ್ನು ಬಲಪಡಿಸುವಲ್ಲಿ ಕನ್ನಡ ಭವನದ ಪಾತ್ರ ಮಹತ್ವದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ವಾಮನ್ ರಾವ್ ಬೇಕಲ್, ಇತ್ತೀಚೆಗೆ ನಡೆದ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 140ಕ್ಕೂ ಅಧಿಕ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಪ್ರಾಬಲ್ಯ ಮತ್ತು ಕನ್ನಡಿಗರ ಒಗ್ಗಟ್ಟನ್ನು ಕಂಡು ಹೊರನಾಡಿನ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

“ಕಾಸರಗೋಡಿನಲ್ಲಿ ಕನ್ನಡದ ರಕ್ಷಣೆಯೇ ನನ್ನ ಕರ್ತವ್ಯ. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಾ ಕನ್ನಡದ ಸೇವೆ ಮಾಡುವುದು ನನ್ನ ಜವಾಬ್ದಾರಿ” ಎಂದು ಅವರು ಹೇಳಿದರು. ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬವೂ ಕನ್ನಡಕ್ಕಾಗಿ ದೊಡ್ಡ ಮಟ್ಟದಲ್ಲಿ ಸೇವೆ ಸಲ್ಲಿಸಬಹುದೆಂಬುದನ್ನು ಕನ್ನಡ ಭವನ ಸಾಬೀತುಪಡಿಸಿದ್ದು, ಸಂಘಟಿತ ಪ್ರಯತ್ನದಿಂದ ಇನ್ನಷ್ಟು ದೊಡ್ಡ ಮಟ್ಟದ ಸೇವೆ ಸಾಧ್ಯ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ವೆಂಕಟರಮಣ ಹೊಳ್ಳ, ಕನ್ನಡ ಭವನದ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿವೆ ಎಂದು ಶ್ಲಾಘಿಸಿದರು. ಪ್ರಶಸ್ತಿಗಾಗಿ ಮಾತ್ರವಲ್ಲ, ಕನ್ನಡದ ಮೇಲಿನ ಅಭಿಮಾನದಿಂದ ಜನರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಸ್ಥಳೀಯ ಕನ್ನಡಾಭಿಮಾನಿಗಳ ಭಾಗವಹಿಸುವಿಕೆ ಹೆಚ್ಚಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆಯರಾದ ಸುಧಾರಾಣಿ ಅನಂಗೂರ್, ದಿವ್ಯಾ ಸಂದೀಪ್ ನಾಗರಕಟ್ಟೆ, ಶ್ರುತಿ ವಿಕಾಸ್ ಕೋಟೆಕಣಿ, ಮಾಜಿ ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ರಾಮರಾಜ ಕ್ಷತ್ರಿಯ ಕೂಡ್ಲು ಉಪಸಂಘದ ಅಧ್ಯಕ್ಷ ಸತೀಶ್ ಕೆ., ಪ್ರದೀಪ್ ನಾಯ್ಕ್ ನಾಗರಕಟ್ಟೆ, ಶರತ್ ಅನಂಗೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಧ್ಯಾರಾಣಿ ಟೀಚರ್ ಸ್ವಾಗತಿಸಿದರು. ವಸಂತ್ ಕೆರೆಮನೆ ವಂದಿಸಿದರು. ರೇಖಾ ಸುದೇಶ್ ರಾವ್ ಹಾಗೂ ಗಿರೀಶ್ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಾಸರಗೋಡಿನ ಯುವ ಗಾಯಕಿ ಅನ್ವಿತಾ ಕಾಮತ್ ಅವರಿಗೆ “ನಾದರತ್ನ ಪ್ರಶಸ್ತಿ” ಪ್ರದಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವು ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಸಂಭ್ರಮ ಹಾಗೂ ಗೌರವದ ವಾತಾವರಣದಲ್ಲಿ ನಡೆಯಿತು.

