ಸಿಎ ಪರೀಕ್ಷೆಯಲ್ಲಿ ದೇಶಕ್ಕೆ 28ನೇ ರ‍್ಯಾಂಕ್: ದೀಪಕ್ ಹೆಗ್ಡೆಗೆ ಅಭಿನಂದನೆ, ಆಳ್ವಾಸ್ ಕಾಲೇಜಿನಲ್ಲಿ ಗೌರವ

0
6

ಮೂಡಬಿದಿರೆ : ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಅಂತಿಮ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 28ನೇ ರ‍್ಯಾಂಕ್ ಗಳಿಸಿ ರಾಜ್ಯಕ್ಕೆ ಹೆಮ್ಮೆ ತಂದಿರುವ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಪ್ರತಿಭಾವಂತ ದೀಪಕ್ ಹೆಗ್ಡೆ ಅವರನ್ನು ಹಾಗೂ ಈ ಸಾಧನೆಗೆ ಮಾರ್ಗದರ್ಶನ ನೀಡಿದ ಆಳ್ವಾಸ್ ಕಾಲೇಜಿನ ಡೀನ್ ಪ್ರಶಾಂತ್ ಎಂ.ಡಿ. ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಲಾಯಿತು. ವಿದ್ಯಾರ್ಥಿಗಳಿಗೆ ದೀಪಕ್ ಹೆಗ್ಡೆ ಅವರ ಸಾಧನೆ ಪ್ರೇರಣೆಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಅವರ ಪಯಣ ಮಾದರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ಮಂಜಿತ್ ಶೆಟ್ಟಿ, ಜಗನ್ನಾಥ್, ಕೀರ್ತನ್ ಪೂಂಜ ಹಾಗೂ ದೀಪಕ್ ಹೆಗ್ಡೆ ಅವರ ತಂದೆ ದಿವಾಕರ್ ಉಪಸ್ಥಿತರಿದ್ದರು.