ಬೆಳ್ತಂಗಡಿ : ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ಆಟೋ ರಿಕ್ಷಾವನ್ನು ಪರಿಶೀಲಿಸಿದ ವೇಳೆ ಮಾದಕ ವಸ್ತು ಸೇವನೆ ಹಾಗೂ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದ್ದು, ಒಬ್ಬ ಆರೋಪಿಯನ್ನು ಬಂಧಿಸಿರುವ ಬೆಳ್ತಂಗಡಿ ಪೊಲೀಸರು, ಇನ್ನೂ ಮೂವರು ಸಹೋದರರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆ.3ರಂದು ಸಂಜೆ ಸುಮಾರು 6.45ರ ವೇಳೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಿಕಂದರ್ ಪಾಷಾ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಕಸಬಾ ಗ್ರಾಮದ ಜೈನ್ ಪೇಟೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ KA-70-9065 ಸಂಖ್ಯೆಯ ಆಟೋ ರಿಕ್ಷಾವನ್ನು ಪರಿಶೀಲಿಸಿದರು. ಈ ವೇಳೆ ಆಟೋದಲ್ಲಿದ್ದ ವ್ಯಕ್ತಿಯೊಬ್ಬರು ಅಮಲಿನಲ್ಲಿರುವುದು ಕಂಡುಬಂದಿದೆ.
ವಿಚಾರಣೆ ವೇಳೆ ಆತನು ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆ ನಿವಾಸಿ ಮಹಮ್ಮದ್ ನೌಶಾದ್ (29) ಎಂದು ಗುರುತಿಸಿಕೊಂಡಿದ್ದಾನೆ. ತನ್ನ ಸಹೋದರರಾದ ಹಮ್ಮತ್ ಖರಾರ್, ಲತೀಫ್ ಹಾಗೂ ಸಿದ್ದೀಕ್ ಅವರು ಮಾದಕ ವಸ್ತುವನ್ನು ತಲಾ ಒಂದು ಗ್ರಾಂ ಪ್ಯಾಕೆಟ್‌ಗಳಲ್ಲಿ ನೀಡಿ, ಪ್ರತಿ ಗ್ರಾಂಗೆ ₹2,000ರಂತೆ ಮಾರಾಟ ಮಾಡಲು ತನ್ನ ಬಳಿ ನೀಡುತ್ತಿದ್ದು, ತಾನು ಆಟೋ ರಿಕ್ಷಾ ಮೂಲಕ ಗ್ರಾಹಕರಿಗೆ ಸಾಗಿಸಿ ಮಾರಾಟ ಮಾಡುತ್ತಿರುವುದಾಗಿ ಹಾಗೂ ಅದೇ ದಿನ ಅವರು ನೀಡಿದ್ದ ಮಾದಕ ವಸ್ತುವನ್ನು ತಾನೂ ಸೇವಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ ಆತನು THC (Marijuana) ಹಾಗೂ Amphetamine (AMP) ಮಾದಕ ವಸ್ತುಗಳನ್ನು ಸೇವಿಸಿರುವುದು ದೃಢಪಟ್ಟಿದ್ದು, ವೈದ್ಯರು ಪ್ರಮಾಣಪತ್ರ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಮ್ಮದ್ ನೌಶಾದ್ ಹಾಗೂ ಆತನಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದರೆಂದು ಆರೋಪಿಸಲಾಗಿರುವ ಸಹೋದರರಾದ ಹಮ್ಮತ್ ಖರಾರ್, ಲತೀಫ್ ಮತ್ತು ಸಿದ್ದೀಕ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(b), 22(a) ಹಾಗೂ 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದಿನ ಪ್ರಕರಣದಲ್ಲಿ ವಾರಂಟ್ ಜಾರಿ
ಮಹಮ್ಮದ್ ನೌಶಾದ್ ವಿರುದ್ಧ ಈ ಹಿಂದೆಯೂ 2026ರ ಜನವರಿ 3ರಂದು ಕುವೆಟ್ಟು ಗ್ರಾಮದಲ್ಲಿ ಎಂಡಿಎಂಎ (MDMA) ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಮಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿತ್ತು.
ಈ ವಾರಂಟ್ ಪ್ರಕರಣದಲ್ಲಿಯೂ ಮಹಮ್ಮದ್ ನೌಶಾದ್‌ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು, ಆ.4ರಂದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

