ಆಗಸ್ಟ್ 8-9ರಂದು ಕೃತಕ ಕೈಕಾಲು ಜೋಡಣೆ ಶಿಬಿರ : ಅಂಗವೈಕಲ್ಯಕ್ಕೆ ಸಲಕರಣೆಗಳ ವಿತರಣೆ

0
7

ಕರ್ನಾಟಕ ಅನಿವಾಸಿ ಭಾರತೀಯ ಒಕ್ಕೂಟ- ಜಿದ್ದಾ ವತಿಯಿಂದ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್, ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶಿನಿ ನಿಲಯ ಸಹಯೋಗದಲ್ಲಿ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ ಹಾಗೂ ವಿಕಲಾಂಗ ಸಲಕರಣೆಗಳ ವಿತರಣಾ ಸಮಾರಂಭವು ಆಗಸ್ಟ್ 8,9ರಂದು ನಗರದ ಜೆಪ್ಪು ವೆಲೆನ್ಸಿಯಾದಲ್ಲಿರುವ ರೋಶನಿ ನಿಲಯದಲ್ಲಿ ನಡೆಯಲಿದೆ.

ಆಗಸ್ಟ್ 8ರಂದು ಆರೋಗ್ಯ ಸಚಿವ ಯು.ಟಿ. ಖಾದರ್ ಶಿಬಿರ ಉದ್ಘಾಟಿಸಲಿದ್ದಾರೆ. ಅಬ್ದುಲ್ ರಝಾಕ್ ಅನಂತಾಡಿ ಅವರಿಂದ ಪ್ರೇರಣಾ ತರಗತಿ ನಡೆಯಲಿದೆ ಎಂದು ಶಿಬಿರದ ಮುಖ್ಯ ಸಂಯೋಜಕ ರಶೀದ್ ವಿಟ್ಲ ತಿಳಿಸಿದರು.

ಈಗಾಗಲೇ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ ರಾಜ್ಯದ ಸುಮಾರು 140 ಫಲಾನುಭವಿಗಳು ಹೆಸರು ನೋಂದಾಯಿಸಿದ್ದು, ಅದರಲ್ಲಿ ಪ್ರಥಮವಾಗಿ ನೋಂದಾಯಿಸಿರುವ 100 ಮಂದಿಯನ್ನು ಆಯ್ಕೆ ಮಾಡಿ ಶಿಬಿರಕ್ಕೆ ಆಹ್ವಾನಿಸಲಾಗಿದೆ. ಎರಡು ದಿನಗಳಲ್ಲಿ ಜೈಪುರ ಬ್ರಾಂಡಿನ ಹಗುರ ಹಾಗೂ ಗುಣಮಟ್ಟದ ಕೃತಕ ಕೈಕಾಲುಗಳನ್ನು ತಯಾರಿಸಿ ಅದೇ ದಿನ ಜೋಡಿಸಿ ಕೊಡಲಾಗುವುದು ಎಂದರು.

ಅಪಘಾತ, ಗ್ಯಾಂಗ್ರಿನ್, ಕ್ಯಾನ್ಸರ್ ಮೊದಲಾದ ರೋಗದಿಂದ ಕೈಕಾಲು ಕಳೆದುಕೊಂಡವರು ಹಾಗೂ ಹುಟ್ಟುವಾಗಲೇ ವಿಕಲಾಂಗರಾದ ಬಡ/ಅಶಕ್ತರು ಶಿಬಿರದ ಫಲಾನುಭವಿಗಳಾಗಿ ಭಾಗವಹಿಸಲಿದ್ದಾರೆ. ಇವರ ತಪಾಸಣೆ ನಡೆಸಿ ಅಂಗಾಂಗದ ಅಳತೆ ತೆಗೆದು ಅದೇ ದಿನ ಕೃತಕ ಅಂಗಾಂಗ ತಯಾರಿಸಿ ಜೋಡಿಸಿ ಕಳುಹಿಸಲಾಗುವುದು.
ವಿಕಲಾಂಗರು ಮತ್ತೆ ನಡೆದಾಡಬೇಕು, ಸಂತೃಪ್ತ ಜೀವನ ನಡೆಸುವಂತಾಗಬೇಕು ಎಂಬುದೇ ಶಿಬಿರದ ಮುಖ್ಯ ಉದ್ದೇಶ. ಶಿಬಿರಾರ್ಥಿಗಳನ್ನು ಹೊರತುಪಡಿಸಿ ಹೊರಗಿನ ಆಯ್ದ ಅಶಕ್ತರಿಗೆ ಗಾಲಿಕುರ್ಚಿ, ವಾಕರ್, ವಾಟರ್ ಬೆಡ್ ಮೊದಲಾದ ಸಲಕರಣೆಗಳನ್ನು ವಿತರಿಸಲಾಗುವುದು. ಒಟ್ಟು ಸುಮಾರು 25 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಅನಿವಾಸಿ ಭಾರತೀಯ ಒಕ್ಕೂಟದ ಮಾಜಿ ಅಧ್ಯಕ್ಷ ಮೊಹಮ್ಮದ್ ಮನ್ಸೂರ್ ಜಿದ್ದಾ, ಮಾಜಿ ಕಾರ್ಯದರ್ಶಿ ಪೀಟರ್ ರೊನಾಲ್ಡ್ ಮಸ್ಕರೇನಸ್, ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಜಾಹ್ ಮೊಹಮ್ಮದ್, ಉಪಾಧ್ಯಕ್ಷ ಅಬೂಬಕರ್ ಪುತ್ತು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್, ಜತೆ ಕಾರ್ಯದರ್ಶಿ ಶೇಖ್ ಇಸ್ಹಾಕ್, ಸದಸ್ಯ ಹಾರಿಸ್ ಕಾನತ್ತಡ್ಕ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವರದಿ ರಾಯಿ ರಾಜ ಕುಮಾರ್