ಪುರಾಣಲೋಕ – ನೀರಾಜನ ಅವಳಿ ಕಾರ್ಯಕ್ರಮಗಳ ಲೋಕಾರ್ಪಣೆ

0
8

ನಮ್ಮ ಪೌರಾಣಿಕ ಮೌಲ್ಯಗಳು ಸಾರ್ವಕಾಲಿಕ: ಡಾ| ಎಂ. ಮೋಹನ ಆಳ್ವ

ಮಂಗಳೂರು : ‘ಭಾರತೀಯ ಪುರಾಣಗಳಲ್ಲಿ ಅಪಾರವಾದ ಜೀವನ ಮೌಲ್ಯಗಳಿವೆ. ಅವು ಸಾರ್ವಕಾಲಿಕವಾದುವುಗಳು. ಪೌರಾಣಿಕ ಕಾವ್ಯಗಳ ಅಧ್ಯಯನದಲ್ಲಿ ಎಳೆಯರಿಗೆ ಆಸಕ್ತಿ ಮೂಡಿಸಿದರೆ ಇಂದಿನ ಪೀಳಿಗೆಯವರಲ್ಲೂ ಪುರಾಣ ಪುರುಷರ ಆದರ್ಶಗಳನ್ನು ಪಾಲಿಸುವ ಮನಸ್ಥಿತಿಯನ್ನು ಬೆಳೆಸಬಹುದಾಗಿದೆ’ ಎಂದು ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದ್ದಾರೆ.

ನಮ್ಮ ಕುಡ್ಲ ವಾಹಿನಿಯಲ್ಲಿ ನೂತನವಾಗಿ ಪ್ರಸಾರವಾಗುವ ‘ಪುರಾಣ ಲೋಕ’ ಕಾವ್ಯ ವಾಚನ – ಪ್ರವಚನದ ಶುಭಾರಂಭ ಮತ್ತು ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿ ‘ನೀರಾಜನ’ ಕನ್ನಡ – ತುಳು ಭಕ್ತಿಗೀತೆಗಳ ಸಂಕಲನ ಬಿಡುಗಡೆಯ ಅವಳಿ ಕಾರ್ಯಕ್ರಮವನ್ನು ಆ.3ರಂದು ನಮ್ಮ ಕುಡ್ಲ ಬಿ.ಪಿ. ಕರ್ಕೇರ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಟಿವಿ ರಿಮೋಟ್ ಒತ್ತುವ ಮೂಲಕ ‘ಪುರಾಣ ಲೋಕ’ದ ಟ್ರೇಲರನ್ನು ಡಾ| ಮೋಹನ ಆಳ್ವ ಬಿಡುಗಡೆಗೊಳಿಸಿದರು. ‘ಹಿಂದಿನ ಕಾಲದಲ್ಲಿ ಮನೆ ಮನೆಗಳಲ್ಲಿ, ಮಠ ಮಂದಿರಗಳಲ್ಲಿ ಆಗುತ್ತಿದ್ದ ಪುರಾಣ ಪ್ರವಚನ ಕಾರ್ಯಕ್ರಮಗಳು ಈಗ ಕಡಿಮೆಯಾಗುತ್ತಿವೆ. ನಮ್ಮ ಕುಡ್ಲದ ಮೂಲಕ ಅದು ಮತ್ತೊಮ್ಮೆ ಮನೆ ಮಾತಾಗಲಿ’ ಎಂದವರು ಹಾರೈಸಿದರು.

‘ನೀರಾಜನ’ ಅನಾವರಣ: ಇದೇ ಸಂದರ್ಭದಲ್ಲಿ ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಟಿಸಿದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ನೀರಾಜನ’ ದೈವ – ದೇವರ ಭಕ್ತಿ – ಸುಗಿಪು ಗೀತಾ ಸಂಕಲನವನ್ನು ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಂಸ್ಥಾಪಕ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಕುತ್ತಿಕಾರ್ ಅವರು ಅನಾವರಣಗೊಳಿಸಿದರು. ‘ಕಲಿಯುಗದಲ್ಲಿ ಕೇವಲ ಭಕ್ತಿಪೂರ್ವಕವಾದ ಸ್ತುತಿ ಮತ್ತು ನಾಮಸ್ಮರಣೆಗಳಿಂದ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ನೀರಾಜನ ಹೆಸರೇ ಸುಂದರ; ಈ ಕೃತಿಯೊಳಗಿನ ಅಪೂರ್ವ ಭಕ್ತಿಗೀತೆಗಳನ್ನು ಸ್ವರ ಸಂಯೋಜಿಸಿ ಆಸ್ತಿಕರೆಲ್ಲರೂ ಅಲ್ಲಲ್ಲಿ ಹಾಡುವಂತಾಗಲಿ’ ಎಂದವರು ಶುಭ ಕೋರಿದರು.

ದ್ವಿಭಾಷಿಕ ಅವಳಿತನದ ಸ್ತುತಿ-ಸುಗಿಪು: ಪ್ರೊ| ಶಿವರಾಮ ಶೆಟ್ಟಿ

ಕೃತಿ ಪರಿಚಯ ಮಾಡಿದ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ| ಬಿ.ಶಿವರಾಮ ಶೆಟ್ಟಿ ಅವರು ‘ನೀರಾಜನ ಕೃತಿ ದೈವ ದೇವರುಗಳ ಕನ್ನಡ – ತುಳು ಭಾಷೆಗಳ ದ್ವಿಭಾಷಿಕ ಅವಳಿತನದ ಭಕ್ತಿ ಸ್ತುತಿ – ಸುಗಿಪು ಗೀತ ಸಂಕಲನ. ಭಕ್ತಿ ಪರಂಪರೆಯ ಶೈವ,ವೈಷ್ಣವ, ಗಾಣಪತ,ಶಾಕ್ತ ಮುಂತಾದ ಪೂಜಾ ಪರಂಪರೆಯ ದೇವರುಗಳನ್ನು ಹಾಗೂ ಇದಕ್ಕೆ ಸಮಾನವಾಗಿ ತುಳುನಾಡಿನ ಜನಪದೀಯ ದೈವ ಮತ್ತು ನಾಗನನ್ನು ಆರಾಧಿಸುವ ಗೀತೆಗಳು, ಜೊತೆಗೆ ಕ್ಷೇತ್ರ ಪುರಾಣ, ಸ್ಥಳ ಮಹಾತ್ಮೆಯ ಸ್ತುತಿ – ಸುಗಿಪು ಹಾಡುಗಳು ಸಮೃದ್ಧವಾಗಿದ್ದು ದೇವಸ್ಥಾನ, ಪೂಜಾ ಮಂದಿರ ಮತ್ತು ಹಬ್ಬ ಹರಿದಿನಗಳಲ್ಲಿ ಹಾಡಲು ಯೋಗ್ಯವಾಗಿವೆ’ ಎಂದರು. ಕೃತಿ ಕರ್ತರಾದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಸ್ವಾಗತಿಸಿದರು. ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ವಂದಿಸಿದರು. ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

ಆ.9 ‘ಪುರಾಣ ಲೋಕ’ ಪ್ರಸಾರ:

ಪುರಾಣ ಲೋಕದ ಮೊದಲ ಸಂಚಿಕೆಗಳಲ್ಲಿ ಸಂತಕವಿ ಕನಕದಾಸರ ‘ನಳ ಚರಿತ್ರೆ’ ಕಾವ್ಯದ ತುಳು – ಕನ್ನಡ ಆವೃತ್ತಿಗಳನ್ನು ಯಕ್ಷಗಾನ ಭಾಗವತ ದೇವಿ ಪ್ರಸಾದ ಆಳ್ವ ತಲಪಾಡಿ ಮತ್ತು ಹರಿಕಥಾ ವಿದುಷಿ ಮಂಜುಳಾ ಜಿ.ರಾವ್ ಇರಾ ವಾಚಿಸಿದ್ದಾರೆ. ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದ್ದಾರೆ. ಆಗಸ್ಟ್ 9 ರಿಂದ ಪ್ರತಿ ಭಾನುವಾರ ಬೆಳಿಗ್ಗೆ ಗಂ.9.00ಕ್ಕೆ ಕಾರ್ಯಕ್ರಮ ನಮ್ಮ ಕುಡ್ಲದಲ್ಲಿ ಪ್ರಸಾರವಾಗುವುದು; ಮಂಗಳವಾರ ರಾತ್ರಿ ಗಂ.9.30 ಕ್ಕೆ ಇದು ಮರುಪ್ರಸಾರವಾಗಲಿದೆ ಎಂದು ವಾಹಿನಿಯ ಪ್ರಕಟಣೆ ತಿಳಿಸಿದೆ.