ಬೋಳದಡ್ಕದಲ್ಲಿ ಮನೆ ಕುಸಿತ : ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

0
34

ಬಂಟ್ವಾಳ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಉಳಿಗ್ರಾಮ ಗ್ರಾಮದ ಬೋಳದಡ್ಕ ನಿವಾಸಿ ಪ್ರಸಾದ್ ಗೌಡ ಅವರ ಮನೆ ಕುಸಿದು ಹಾನಿಗೊಳಗಾದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆ ಕುಸಿತದಿಂದ ಉಂಟಾದ ಹಾನಿಯನ್ನು ವೀಕ್ಷಿಸಿದ ಶಾಸಕರು, ಸಂತ್ರಸ್ತ ಪ್ರಸಾದ್ ಗೌಡ ಹಾಗೂ ಅವರ ಕುಟುಂಬದ ಸದಸ್ಯರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಕ್ಕೆ ಸರ್ಕಾರದ ನಿಯಮಾನುಸಾರ ಪರಿಹಾರ ಹಾಗೂ ಅಗತ್ಯ ನೆರವು ಶೀಘ್ರ ದೊರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆ ಇನ್ನೂ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮನೆಗಳು ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳ ಬಗ್ಗೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಅಗತ್ಯವಿದ್ದಲ್ಲಿ ತಕ್ಷಣ ಸ್ಥಳಾಂತರ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಚಿದಾನಂದ ರೈ, ಸುರೇಶ್ ಮೈರ, ವಸಂತ ಉಳಿ, ರೋಹಿನಾಥ, ಗುರುಪ್ರಸಾದ್ ನಾಯಕ್, ಗ್ರಾಮ ಆಡಳಿತಾಧಿಕಾರಿ ಚೆನ್ನಬಸಪ್ಪ, ಪಂಚಾಯತ್ ಕಾರ್ಯದರ್ಶಿ ಯಶೋಧರ ಶೆಟ್ಟಿ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.