ಕಾರ್ಕಳ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಡಾ.ಶೇಖರ ಅಜೆಕಾರು ರಾಜ್ಯ ಪ್ರಶಸ್ತಿಯನ್ನು ಡಂಗುರ ಪತ್ರಿಕೆಯ ಸಂಪಾದಕ ಕುಂಟಾಡಿ ದಯಾನಂದ ಪೈ ಅವರಿಗೆ ಕಾರ್ಕಳದ ಸಾಣೂರು ರಾಜೇಶ್ವರಿ ಪ.ಪೂ.ಕಾಲೇಜಿನಲ್ಲಿ ಆಗಸ್ಟ್ 6 ರಂದು ಪ್ರದಾನ ಗೈದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ ಆಳ್ವ ಮಾತನಾಡಿದರು.

ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಸಮಾಜದ ಉನ್ನತಿಗೆ, ವಿದ್ಯಾರ್ಥಿಗಳ ವಿದ್ಯಾಭಿವೃದ್ಧಿಗೆ ಸದಾ ಸ್ಪಂದಿಸುತ್ತಾ, ನೈಜ ಪತ್ರಕರ್ತ ರಾಗಿದ್ದ ಡಾ.ಶೇಖರ ಅಜೆಕಾರು ಹಲವಾರು ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿ. ಅಂತಹ ಮೇರು ವ್ಯಕ್ತಿತ್ವದ ಚೇತನವನ್ನು ಕಾರ್ಕಳ ಪತ್ರಕರ್ತರು ಸೂಕ್ತವಾಗಿ ಸ್ಮರಿಸಿಕೊಂಡಿದ್ದಾರೆ ಎಂದು ಅಭಿನಂದಿಸಿದರು.

ರಾಜ್ಯ ಕ್ರಷರ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ, ರಾಜೇಶ್ವರಿ ಪ.ಪೂ. ಕಾಲೇಜು ಸಂಸ್ಥಾಪಕ ದೇವಿ ಪ್ರಸಾದ್ ಶೆಟ್ಟಿ, ಕಾರ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಹಾಗೂ ಇತರರು ಶೇಖರ್ ಅಜೆಕಾರು ಅವರನ್ನು ಸ್ಮರಿಸಿ ದಯಾನಂದ ಪೈ ಅವರಿಗೆ ಶುಭ ಹಾರೈಸಿದರು. ಸನ್ಮಾನಕ್ಕೆ ಉತ್ತರಿಸಿದ ದಯಾನಂದ ಪೈ ಸಾಣೂರು ಹಾಗೂ ಇರ್ವತ್ತೂರು ಗಳ ವಿಶೇಷತೆಯನ್ನು ತಿಳಿಸಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಮಣ್ಯ ಕುರ್ಯ, ಹೆಸರಾಂತ ಪತ್ರಿಕಾ ಛಾಯಾಗ್ರಹಕ ಆಸ್ಟ್ರೋ ಮೋಹನ್, ಕಾರ್ಯದರ್ಶಿ ನಜೀರ್ ಪೊಲ್ಯ, ಉಪಾಧ್ಯಕ್ಷ ಉದಯಕುಮಾರ್, ಕೋಶಾಧಿಕಾರಿ ಸತೀಶ್ ಹಾಜರಿದ್ದರು. ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಾಸುದೇವ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಹರೀಶ್ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಹರೀಶ್ ಪೂಜಾರಿ ವಂದಿಸಿದರು.
.

