ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ

0
24

ಪ್ರವಾಸಿಗ ಕೂದಲೆಳೆ ಅಂತರದಲ್ಲಿ ಪಾರು

ಚಿಕ್ಕಮಗಳೂರು : ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರವೊಂದು ಬುಡಸಮೇತ ಉರುಳಿ ಬಿದ್ದ ಪರಿಣಾಮ ಪ್ರವಾಸಿಗನೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಮಾರ್ಗದಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಚನ್ನಗೋಡನಹಳ್ಳಿ ಸಮೀಪ ಈ ಘಟನೆ ಸಂಭವಿಸಿದೆ. ಮುಳ್ಳಯ್ಯನಗಿರಿ ಕಡೆಗೆ ತೆರಳುತ್ತಿದ್ದ ಬೈಕ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ, ಏಕಾಏಕಿ ಬೃಹತ್ ಮರ ಬುಡಸಮೇತ ರಸ್ತೆಗೆ ಉರುಳಿಬಿದ್ದಿದೆ. ಮರದ ತುದಿಭಾಗ ಮಾತ್ರ ಬೈಕ್ ಮೇಲೆ ಬಿದ್ದಿದ್ದರಿಂದ ಸವಾರ ಗಂಭೀರ ಅಪಾಯದಿಂದ ಪಾರಾಗಿದ್ದು, ಬೈಕ್‌ಗೆ ಹಾನಿಯಾಗಿದೆ.

ಸ್ಥಳೀಯರ ಪ್ರಕಾರ, ಮರದ ಮಧ್ಯಭಾಗವೇ ಬೈಕ್ ಮೇಲೆ ಬಿದ್ದಿದ್ದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಘಟನೆಯ ಬಳಿಕ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಧಾವಿಸಿ ಸವಾರನಿಗೆ ನೆರವಾದರು.

ಕಳೆದ ಕೆಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಮಣ್ಣು ಸಡಿಲಗೊಂಡಿದ್ದು, ಮರಗಳು ಉರುಳುವುದು ಹಾಗೂ ಸಣ್ಣ ಪ್ರಮಾಣದ ಭೂಕುಸಿತಗಳು ವರದಿಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಅನಗತ್ಯ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸಿ, ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.