ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ : ತಂದೆ ಸೇರಿ ಏಳು ಮಂದಿಯ ವಿರುದ್ಧ ಪೋಕ್ಸೋ ಪ್ರಕರಣ

0
23

ಪತ್ತನಂತಿಟ್ಟ : ಹತ್ತನೇ ತರಗತಿಯ ಪ್ರಾಯಪೂರ್ವ ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಸ್ವಂತ ತಂದೆ ಸೇರಿದಂತೆ ಏಳು ಮಂದಿ ಹಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಏಳು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪೊಲೀಸರ ಮಾಹಿತಿ ಪ್ರಕಾರ, ಬಾಲಕಿ ಐದನೇ ತರಗತಿಯಲ್ಲಿದ್ದಾಗಿನಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಆಕೆ ತನ್ನ ಸಹಪಾಠಿಗಳ ಬಳಿ ಈ ಕುರಿತು ಮನಬಿಚ್ಚಿ ಮಾತನಾಡಿದ ಬಳಿಕ ವಿಷಯ ಶಾಲಾ ಆಡಳಿತದ ಗಮನಕ್ಕೆ ಬಂದಿದೆ. ಬಳಿಕ ಶಾಲಾ ಆಡಳಿತವು ಮಕ್ಕಳ ಕಲ್ಯಾಣ ಸಮಿತಿ (CWC)ಗೆ ಮಾಹಿತಿ ನೀಡಿದ್ದು, ಸಮಾಲೋಚನೆ ವೇಳೆ ನೀಡಿದ ಬಾಲಕಿಯ ಹೇಳಿಕೆ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಕರಣದಲ್ಲಿ ಬಾಲಕಿ ವಾಸಿಸುತ್ತಿದ್ದ ಮನೆಯ ಮಾಲೀಕ ಹಾಗೂ ಅದೇ ಕಟ್ಟಡದ ಮತ್ತೋರ್ವ ನಿವಾಸಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಶಂಕಿತನ ವಿಚಾರಣೆ ನಡೆಯುತ್ತಿದೆ. ಪ್ರಮುಖ ಆರೋಪಿಯಾಗಿರುವ ಬಾಲಕಿಯ ತಂದೆ ಪ್ರಸ್ತುತ ವಿದೇಶದಲ್ಲಿದ್ದು, ಆತನನ್ನು ಭಾರತಕ್ಕೆ ಕರೆತರಲು ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ.

ಒಬ್ಬ ಆರೋಪಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧದ ಕಾನೂನು ಪ್ರಕ್ರಿಯೆಯನ್ನು ನಿಯಮಾನುಸಾರ ಮುಕ್ತಾಯಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ನ್ಯಾಯಾಲಯದ ಮುಂದೆ ಹೇಳಿಕೆಯನ್ನೂ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.