ಕೊಲ್ಲೂರಿನಲ್ಲಿ ಮರಕ್ಕೆ ಕಟ್ಟಿ ಹಾಕಿ ಯುವಕನಿಗೆ ಹಲ್ಲೆ ಆರೋಪಿಗಳ ಬಂಧನ

0
107

ಉಡುಪಿ : ಕೊಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಜಾತಿನಿಂದನೆ ಮಾಡಿದ ಆರೋಪದಲ್ಲಿ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಮತ್ತು ಪ್ರತಿದೂರುಗಳು ದಾಖಲಾಗಿದ್ದು, ಪೊಲೀಸರು ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನೊಂದ ಮಹಿಳೆಯೊಬ್ಬರು ನೀಡಿದ ದೂರಿನಂತೆ, ಸನತ್‌ ಕುಂದಾಪುರ ಎಂಬ ವ್ಯಕ್ತಿ ಆಕೆಯ ಮನೆಯ ಬಳಿ ಬಂದು ಮಾನಕ್ಕೆ ಕುಂದುಂಟಾಗುವಂತೆ ವರ್ತಿಸಿ, ಜಾತಿ ನಿಂದನೆ ಮಾಡಿದ್ದಾರೆನ್ನಲಾಗಿದೆ. ಈ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಸನತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿದೂರು

ನೊಂದ ಮಹಿಳೆಯ ಕುಟುಂಬಸ್ಥರು ಆರೋಪಿ ಯುವಕನನ್ನು ಕಟ್ಟಿಹಾಕಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯುವಕ ನೀಡಿದ ದೂರಿನನ್ವಯ ಕೊಲ್ಲೂರು ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಕಲಂ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಎರಡೂ ಪ್ರಕರಣಗಳ ಕುರಿತು ಪೊಲೀಸರು ಸುದೀರ್ಘ ತನಿಖೆ ಕೈಗೊಂಡಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.