ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆತಿದೆ. ಸಂಸ್ಥೆಯು ಪ್ರಕಟಣೆ ಸಂಖ್ಯೆ ISRO:ICRB:01(A-JPA):2026 ಅಡಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಭಾರತೀಯ ನಾಗರಿಕರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 242 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅವುಗಳಲ್ಲಿ ಅಸಿಸ್ಟೆಂಟ್ (Assistant) – 120, ಅಪ್ಪರ್ ಡಿವಿಷನ್ ಕ್ಲರ್ಕ್ (UDC) – 76, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ (JPA) – 22 ಹಾಗೂ ಸ್ಟೆನೋಗ್ರಾಫರ್ – 24 ಹುದ್ದೆಗಳು ಸೇರಿವೆ.
ಅಸಿಸ್ಟೆಂಟ್ ಹಾಗೂ ಯುಡಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳಿಗೆ ಪದವಿಯೊಂದಿಗೆ ನಿಮಿಷಕ್ಕೆ 60 ಪದಗಳ ಇಂಗ್ಲಿಷ್ ಸ್ಟೆನೋಗ್ರಫಿ ವೇಗ ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸಲು ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಕೇಂದ್ರ ಸರ್ಕಾರದ ನಿಯಮಾನುಸಾರ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಇತರೆ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗ (7th CPC) ಪ್ರಕಾರ ಲೆವೆಲ್-4 ವೇತನ ಶ್ರೇಣಿ ಅನ್ವಯವಾಗಲಿದೆ. ಆರಂಭಿಕ ಮೂಲ ವೇತನ ₹25,500 ಆಗಿದ್ದು, ಇದರ ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ ಸೇರಿದಂತೆ ಕೇಂದ್ರ ಸರ್ಕಾರದ ಇತರೆ ಸೌಲಭ್ಯಗಳೂ ದೊರೆಯಲಿವೆ.
ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲು ಲಿಖಿತ ಪರೀಕ್ಷೆ, ಬಳಿಕ ಹುದ್ದೆಗೆ ಅನುಗುಣವಾಗಿ ಟೈಪಿಂಗ್ ಅಥವಾ ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆ, ನಂತರ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಆಗಸ್ಟ್ 16ರೊಳಗೆ ISRO ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಹಾಗೂ ನಿಯಮಗಳನ್ನು ಪರಿಶೀಲಿಸುವಂತೆ ಸಂಸ್ಥೆ ಸೂಚಿಸಿದೆ.

