ಮಂಗಳೂರು : ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರುವ ಸಂದೀಪ್ ಬೆದ್ರ ನಿರ್ದೇಶನದ “ಪಿಚ್ಚರ್” ಸಿನಿಮಾದ ಬಿಡುಗಡೆ ಸಮಾರಂಭವು ಆಗಸ್ಟ್ 7 ರಂದು ಭಾರತ್ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಕರಾವಳಿ ಜಿಲ್ಲೆಯಿಂದ ಬಹಳಷ್ಟು ಕಲಾವಿದರು ಸ್ಯಾಂಡಲ್ ವುಡ್ ಗೆ ಹೋಗಿದ್ದಾರೆ. ನಿರ್ಮಾಪಕಿ ಶಿಲ್ಪಾಗಣೇಶ್ ಜಿಲ್ಲೆಯವರಾಗಿದ್ದು, ತುಳು ಸಿನಿಮಾ ಮಾಡುವ ಮೂಲಕ ಈ ಮಣ್ಣಿನ ಋಣ ತೀರಿಸುವ ಕೆಲಸ ಮಾಡಿದ್ದಾರೆ. ತುಳು ರಂಗಭೂಮಿಯ ಬಹಳಷ್ಟು ಕಲಾವಿದರಿಗೆ ಅವಕಾಶ ನೀಡಿದ್ದಾರೆ. ನಿತ್ಯ ಪ್ರಕಾಶ್ ಎಂಬ ಪ್ರತಿಭಾವಂತನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ಎಂದರು.
ಖ್ಯಾತ ನಿರ್ದೇಶಕ ಡಾ ದೇವದಾಸ್ ಕಾಪಿಕಾಡ್ ಮಾತನಾಡಿ ನಿರ್ಮಾಪಕಿ ಶಿಲ್ಪಾಗಣೇಶ್ ತುಳುಚಿತ್ರರಂಗಕ್ಕೆ ಶಕ್ತಿಯಾಗಿ ಕೆಲಸ ಮಾಡಿದ್ದಾರೆ. ಕಿರಿಯರ ಜೊತೆಗೆ ಹಿರಿಯ ಕಲಾವಿದರಿಗೂ ಅವಕಾಶ ನೀಡಿದ್ದಾರೆ. ನಿತ್ಯ ಪ್ರಕಾಶನ ಮೊದಲ ಸಿನಿಮಾ ಪ್ರಕಾಶಮಾನವಾಗಲಿ ಎಂದರು.
ತುಳು ಸಿನಿಮಾರಂಗದಲ್ಲಿ ಪ್ರಥಮ ಬಾರಿಗೆ ಸಿನಿಮಾ ನಿರ್ಮಿಸಿದ್ದೇನೆ. ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿ ಎಲ್ಲರಿಂದಲೂ ದೊಡ್ಡ ಮಟ್ಟದ ಪ್ರೋತ್ಸಾಹ ದೊರೆತಿದೆ, ಪ್ರೀಮಿಯರ್ ಶೋಗಳಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಶಿಲ್ಪಾ ಗಣೇಶ್ ತಿಳಿಸಿದರು.
ಸಮಾರಂಭದಲ್ಲಿ ಭೋಜರಾಜ್ ವಾಮಂಜೂರು, ಶರ್ಮಿಳಾ ಡಿ ಕಾಪಿಕಾಡ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್,
ಪುಷ್ಪರಾಜ್ ಬೊಳ್ಳಾರ್, ನಾಯಕ ನಟ ನಿತ್ಯ ಪ್ರಕಾಶ್, ನಾಯಕಿ ನಟಿ ಅಮೃತ ಸದು, ನಿರ್ದೇಶಕ ಸಂದೀಪ್ ಬೆದ್ರ ಉಪಸ್ಥಿತರಿದ್ದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.
ಪಿಚ್ಚರ್ ಸಿನಿಮಾ ಮಂಗಳೂರು ಉಡುಪಿ, ಮಣಿಪಾಲ, ಕುಂದಾಪುರ, ಸುರತ್ಕಲ್ ಪಡುಬಿದ್ರೆ, ಕಾರ್ಕಳ, ಪುತ್ತೂರು, ಬೆಳ್ತಂಗಡಿ, ದೇರಳಕಟ್ಟೆ,ಸುಳ್ಯ ಮೊದಲಾದ ಕಡೆಗಳಲ್ಲಿ ತೆರೆಕಂಡಿದೆ.
ಬಹುತೇಕ ಕರಾವಳಿಯ ಕಲಾವಿದರನ್ನೇ ಬಳಸಿಕೊಂಡು ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ನಿರ್ಮಾಣ ಮಾಡಿರುವ ಪಿಚ್ಚರ್ ಸಿನಿಮಾವು ರಾಜ್ಯಾಧ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದೆ. ಪಿಚ್ಚರ್ ಸಿನಿಮಾದ ಹಾಡು, ಟ್ರೇಲರ್‌ಗಳಿಂದ ಎಲ್ಲರ ಗಮನ ಸೆಳೆದು ಕುತೂಹಲ ಮೂಡಿಸಿರುವ ಕಾರಣ, ಆ ಸಿನಿಮಾದ ಬಿಡುಗಡೆಯನ್ನು ಚಿತ್ರಪ್ರೇಮಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು.
ಗೋಲ್ಡನ್ ಮೂವೀಸ್ ಬ್ಯಾನರ್‌ನಡಿಯಲ್ಲಿ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಸಂದೀಪ್ ಬೆದ್ರ ಅವರು ನಿರ್ದೇಶಿಸಿದ್ದಾರೆ. ಇದು ಇವರು ನಿರ್ದೇಶಿಸಿರುವ ಚೊಚ್ಚಲ ಸಿನಿಮಾ.
ಈ ಸಿನಿಮಾದಲ್ಲಿ ನಾಯಕ ನಟನಾಗಿ ಬಹುಮುಖ ಪ್ರತಿಭೆ, ಚಾಕೊಲೇಟ್ ಹೀರೋ ಆಗಿರುವ ನಿತ್ಯಪ್ರಕಾಶ್ ಬಂಟ್ವಾಳ ಅವರು ನಟಿಸಿರುವುದು ಕೂಡ ಕರಾವಳಿಯ ಜನರು ಕುತೂಹಲದಿಂದ ಕಾಯುವಂತೆ ಮಾಡಿರುವ ಇನ್ನೊಂದು ಪ್ರಮುಖ ಅಂಶ. ಈ ಸಿನಿಮಾದಲ್ಲಿ ಬಹುತೇಕ ಕರಾವಳಿಯ ಎಲ್ಲ ಪ್ರಮುಖ ಕಲಾವಿದರೂ ಇದ್ದಾರೆ. ಆದ್ದರಿಂದ ಹಾಸ್ಯಕ್ಕೂ ಕೊರತೆ ಖಂಡಿತಾ ಇರುವುದಿಲ್ಲ. ಒಂದು ಉತ್ತಮ ಸಂದೇಶ ಹೊತ್ತುಕೊಂಡು, ಕುಟುಂಬ ಸಮೇತ ನೋಡುವಂಥ ಈ ಸಿನಿಮಾ ಒಂದು ವಿಶೇಷ ಕಥೆಯನ್ನೂ ಹೊಂದಿದೆ ಎಂದು ನಿರ್ಮಾಪಕಿ ಶಿಲ್ಪಾಗಣೇಶ್ ತಿಳಿಸಿದ್ದಾರೆ.
ಈ ಚಿತ್ರದ ಟ್ರೇಲರ್ ಬಿಡುಗಡೆಯಾದ ದಿನದಿಂದಲೇ ಇದರ ಬಗ್ಗೆ ಜನರು ಕೌತುಕ ಪಡುವಂತೆ ಆಗಿದೆ. ಹಾಡುಗಳೂ ಕೂಡ ಒಂದಕ್ಕಿಂತ ಒಂದು ಅದ್ಭುತವಾಗಿದ್ದು, ಈಗ ಎಲ್ಲೆಡೆಯೂ ಕೇಳಿ ಬರುತ್ತಿದೆ. ಇವೆಲ್ಲವೂ ಚಿತ್ರ ಯಶಸ್ಸಾಗುವುದು ಖಚಿತ ಎಂಬುದನ್ನು ಸ್ಪಷ್ಟಪಡಿಸಿತ್ತು.
ನಿತ್ಯಪ್ರಕಾಶ್‌ಗೆ ಅಮೃತ ಸದು ಅವರು ನಾಯಕಿಯಾಗಿದ್ದು, ಡಾ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್ ಬೊಳ್ಳಾರ್, ರವಿ ರಾಮಕುಂಜ ಸಾಯಿಕೃಷ್ಣ ಕುಡ್ಲ, ರೂಪಾ ವರ್ಕಾಡಿ ಸಹಿತ ಕರಾವಳಿಯ ಪ್ರಮುಖ ಎಲ್ಲ ಕಲಾವಿದರೂ ಪಿಚ್ಚರ್‌ನಲ್ಲಿ ಅಭಿನಯಿಸಿದ್ದಾರೆ.
ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಸ್ಯಾಮ್ಯುವೆಲ್ ಅಭಿ ಅವರು ಸಂಗೀತ ನೀಡಿದ್ದಾರೆ. ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಒಂದು ಹಾಡು ಹಾಡಿದ್ದು, ಅವರ ಕಂಠದಲ್ಲಿ ‘ಗೋಕುಲದ ರಾಧೆ’ ಎಂಬ ಹಾಡು ಅದ್ಭುತವಾಗಿ ಮೂಡಿಬಂದಿದೆ. ಮೂಲತಃ ಕರಾವಳಿಯವರೇ ಆಗಿರುವ ಇವರು ಹುಟ್ಟೂರಿನ ಪ್ರೀತಿಯೊಂದಿಗೆ ಈ ಸಿನಿಮಾ ಮಾಡಿದ್ದು, ಇಡೀ ರಾಜ್ಯದ ಜನರು ನೋಡಬೇಕೆಂಬ ಕಾರಣಕ್ಕೆ ಇದನ್ನು ಕನ್ನಡದಲ್ಲೂ ಬಿಡುಗಡೆ ಮಾಡುತ್ತಿದ್ದಾರೆ.
ಈ ಸಿನಿಮಾದ ನಾಯಕ ಯಾವುದೋ ಕಂಪೆನಿಯಲ್ಲಿ ಎಚ್‌ಆರ್ ವಿಭಾಗದಲ್ಲಿ ಕೈತುಂಬಾ ವೇತನದ ಉದ್ಯೋಗದಲ್ಲಿದ್ದವರು. ಆದರೆ ಅವರ ಅಭಿರುಚಿಯೇ ಬೇರೆಯಾಗಿತ್ತು. ಸಿನಿಮಾ, ಫೋಟೋಗ್ರಫಿಯಲ್ಲಿ ವಿಶೇಷ ಆಸಕ್ತಿ. ಡಿಸ್ಟಿಂಕ್ಷನ್‌ನಲ್ಲಿ ಎಂಎಚ್‌ಆರ್‌ಡಿ ಮುಗಿಸಿರುವ ಇವರು ಫೋಟೋಗ್ರಫಿ ಹುಚ್ಚು ಹಿಡಿಸಿಕೊಂಡು ಎಲ್ಲೆಲ್ಲಿ ಕೆಮರಾ ಹಿಡಿದು ಕಲಾತ್ಮಕ ಫೋಟೋಗಳನ್ನು ಕ್ಲಿಕ್ಕಿಸಿ ತನ್ನ ಪ್ರತಿಭೆಯನ್ನು ಸಾಬೀತು ಮಾಡಿದವರು. ಫೋಟೋಗ್ರಫಿಯಲ್ಲಿ ಇವರಿಗೆ ಅಮೆರಿಕ, ಆಸ್ಟ್ರೇಲಿಯಾ ಮುಂತಾದ ಪ್ರಮುಖ ದೇಶಗಳಿಂದ ಒಟ್ಟು 11 ಪ್ರಶಸ್ತಿಗಳು, 7 ರಾಜ್ಯ ಪ್ರಶಸ್ತಿಗಳು ಸಂದಿವೆ. ಇದರ ನಡುವೆಯೇ ಸಿನಿಮಾದಲ್ಲಿ ಅವಕಾಶಕ್ಕಾಗಿ ಶ್ರಮಿಸಿದರು. ಅದಕ್ಕೆ ಗೋಲ್ಡನ್ ಮೂವೀಸ್ ಸ್ಪಂದಿಸಿತು. ಇವರ ಪ್ರತಿಭೆಯನ್ನು ಗಮನಿಸಿ ಮೊದಲ ಸಿನಿಮಾದಲ್ಲೇ ನಾಯಕನ ಪಾತ್ರವನ್ನು ನೀಡಲಾಗಿದೆ.

