ಚಿತ್ರದುರ್ಗದಲ್ಲಿ KRS ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ: ರಾಜ್ಯಮಟ್ಟದ ಬೃಹತ್ ಸಮಾವೇಶ

0
6

ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ 7ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಬೃಹತ್ ರಾಜ್ಯಮಟ್ಟದ ಸಮಾವೇಶವು 2026ರ ಆಗಸ್ಟ್ 10ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿದೆ. ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣದ ಆಶಯದೊಂದಿಗೆ ಮುನ್ನಡೆಯುತ್ತಿರುವ ಕೆ.ಆರ್.ಎಸ್. ಪಕ್ಷವು ತನ್ನ ಏಳು ವರ್ಷಗಳ ಹೋರಾಟದ ಪಯಣವನ್ನು ಸ್ಮರಿಸುವುದರ ಜೊತೆಗೆ ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಧೃಡಗೊಳಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಿದೆ.

ಈ ಸಮಾವೇಶಕ್ಕೆ ಪಕ್ಷದ ಸಂಸ್ಥಾಪಕರು ಹಾಗು ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದು, ರಾಜ್ಯದ ಎಲ್ಲಾ ಭಾಗಗಳಿಂದ ಪಕ್ಷದ ಸದಸ್ಯರು, ಪದಾಧಿಕಾರಿಗಳು ಹಾಗು ಬೆಂಬಲಿಗರು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಕೆ.ಆರ್.ಎಸ್. ಪಕ್ಷದ ಸಂಸ್ಥಾಪನಾ ದಿನಾಚರಣೆಯು ಕೇವಲ ವಾರ್ಷಿಕೋತ್ಸವವಲ್ಲ; ಭ್ರಷ್ಟಾಚಾರಮುಕ್ತ, ಪಾರದರ್ಶಕ ಹಾಗೂ ಜನಪರ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ಮತ್ತೊಮ್ಮೆ ಘೋಷಿಸುವ ಐತಿಹಾಸಿಕ ಸಮಾವೇಶವಾಗಿದೆ.

2019ರ ಆಗಸ್ಟ್ 10ರಂದು ಶ್ರೀ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು, ಹಣ, ಹೆಂಡ ಮತ್ತು ಆಮಿಷಗಳ ರಾಜಕಾರಣಕ್ಕೆ ಪರ್ಯಾಯವಾಗಿ ಸಿದ್ಧಾಂತ ಆಧಾರಿತ, ಪಾರದರ್ಶಕ ಹಾಗೂ ಸಾಮಾನ್ಯ ಜನರೇ ನಡೆಸುವ ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ರಾಜ್ಯವನ್ನು ದಶಕಗಳಿಂದ ಆಳುತ್ತಿರುವ ಕೆಲವೇ ರಾಜಕೀಯ ಕುಟುಂಬಗಳ ಪ್ರಭಾವದಿಂದ ಮುಕ್ತಗೊಳಿಸಿ, ಸಾಮಾನ್ಯ ನಾಗರಿಕರು ಹಾಗೂ ಯುವಜನರು ರಾಜಕೀಯದ ಮುಂಚೂಣಿಗೆ ಬರಬೇಕೆಂಬುದು ಪಕ್ಷದ ಪ್ರಮುಖ ಧ್ಯೇಯವಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕ ಆಡಳಿತ ಜಾರಿಯಾಗಬೇಕು. ಯಾವುದೇ ಲಂಚ, ಮಧ್ಯವರ್ತಿಯ ಅಥವಾ ರಾಜಕೀಯ ಪ್ರಭಾವವಿಲ್ಲದೆ ಜನರಿಗೆ ನಿಗದಿತ ಸಮಯದಲ್ಲಿ ಸೇವೆ ಮತ್ತು ನ್ಯಾಯ ದೊರೆಯಬೇಕು ಎಂಬುದು ಪಕ್ಷದ ನಿಲುವಾಗಿದೆ. ಜೊತೆಗೆ, ಸರ್ಕಾರದಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಪಾರದರ್ಶಕವಾಗಿ ತಕ್ಷಣ ಭರ್ತಿ ಮಾಡಬೇಕೆಂದು, ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಬೆಳೆ ಯೋಜನೆ, ನ್ಯಾಯಸಮ್ಮತ ಬೆಲೆ ನೀತಿ, ರೈತರಿಗೆ ಖಚಿತ ಮಾರುಕಟ್ಟೆ ಹಾಗೂ ಲಾಭದಾಯಕ ಬೆಂಬಲ ಬೆಲೆ ಒದಗಿಸುವ ನೀತಿಗಳನ್ನು ಜಾರಿಗೊಳಿಸುವಂತೆ ಪಕ್ಷ ನಿರಂತರ ಹೋರಾಟ ನಡೆಸುತ್ತಿದೆ.

ಪಕ್ಷವು ಆರಂಭವಾದಾಗಿನಿಂದ ನಿರಂತರವಾಗಿ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದು, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಹಣ ಅಥವಾ ಆಮಿಷಗಳನ್ನು ಬಳಸದೆ 195 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕೆ.ಆರ್.ಎಸ್. ಪಕ್ಷ, 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿ ಸ್ವಚ್ಛ ರಾಜಕಾರಣಕ್ಕೆ ಬದ್ಧತೆಯನ್ನು ಪ್ರದರ್ಶಿಸಿತು. ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ಸ್ಪರ್ಧಿಸಲು ಪಕ್ಷ ಸಜ್ಜಾಗಿದೆ.

₹ 100 ಹಾಗೂ ₹ 1,000 ದೇಣಿಗೆ ಆಧಾರಿತ ಸದಸ್ಯತ್ವದ ಮೂಲಕ 67,000ಕ್ಕೂ ಅಧಿಕ ನೋಂದಾಯಿತ ಸದಸ್ಯರನ್ನು ಹೊಂದಿರುವ ಕೆ.ಆರ್.ಎಸ್. ಪಕ್ಷವು ಜನರ ಕಿರು ದೇಣಿಗೆಯ (ಕ್ರೌಡ್‌ಫಂಡಿಂಗ್) ಮೂಲಕವೇ ತನ್ನ ಸಂಘಟನೆಯನ್ನು ಬೆಳೆಸಿಕೊಂಡಿದೆ. ಕಳೆದ ಏಳು ವರ್ಷಗಳ ಹೋರಾಟಕ್ಕೆ ನಾಡಿನ ಜನತೆಯೇ ಪ್ರಮುಖ ಶಕ್ತಿಯಾಗಿದ್ದಾರೆ.
ಆದ್ದರಿಂದ ರಾಜ್ಯದ ಯುವಜನರು, ರೈತರು, ಕಾರ್ಮಿಕರು, ಮಹಿಳೆಯರು, ಪ್ರಜ್ಞಾವಂತ ನಾಗರಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಸ್ಟ್ 10ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ಆಗಮಿಸಿ ಈ ಬೃಹತ್ ರಾಜ್ಯಮಟ್ಟದ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಮನವಿ ಮಾಡಿದೆ.