ಗಿಳಿವಿಂಡು ಅಭಿವೃದ್ಧಿಗೆ ಮತ್ತೆ ಕಾಯಕಲ್ಪ: ದುರಸ್ತಿ ಕಾಮಗಾರಿಗೆ ಚಾಲನೆ, ₹1 ಕೋಟಿ ವಿಶೇಷ ಅನುದಾನಕ್ಕೆ ಮನವಿ

0
28

ಕಾಸರಗೋಡು : ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಸ್ಮಾರಕವಾಗಿರುವ ಮಂಜೇಶ್ವರದ ‘ಗಿಳಿವಿಂಡು’ ರಾಷ್ಟ್ರಕವಿ ನಿವಾಸದ ಅಭಿವೃದ್ಧಿಗೆ ಮತ್ತೆ ವೇಗ ದೊರೆತಿದೆ. ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮನವಿಗೆ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಸ್ಮಾರಕದ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಸಮಗ್ರ ಅಭಿವೃದ್ಧಿಗಾಗಿ ₹1 ಕೋಟಿ ವಿಶೇಷ ಅನುದಾನ ನೀಡುವಂತೆ ಕೇರಳ ಹಾಗೂ ಕರ್ನಾಟಕ ಸರ್ಕಾರಗಳಿಗೆ ಮನವಿ ಸಲ್ಲಿಸಲು ಮುಂದಾಗಲಾಗಿದೆ.

ಅಂತರರಾಷ್ಟ್ರೀಯ ಬಹುಭಾಷಾ ವಿದ್ವಾಂಸ ಹಾಗೂ ಸಾಂಸ್ಕೃತಿಕ ರಾಯಭಾರಿ ಎಲ್.ಜಿ. ಜ್ಯೋತೀಶ್ವರ ಬೆಂಗಳೂರು ಅವರು ಜೂನ್ 2ರಂದು ಮಂಜೇಶ್ವರದ ‘ಗಿಳಿವಿಂಡು’ಗೆ ಭೇಟಿ ನೀಡಿ, ರಾಷ್ಟ್ರಕವಿಯ ಸ್ಮಾರಕ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕುರಿತು ವಿಷಾದ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಸರಗೋಡು ಕನ್ನಡ ಗ್ರಾಮ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಜೂನ್ 8ರಂದು ಕೇರಳ ಮತ್ತು ಕರ್ನಾಟಕ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯ್ಲಿ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದರು.

ಹಲವು ವರ್ಷಗಳ ಹಿಂದೆ ಕೇರಳ–ಕರ್ನಾಟಕ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಹೆಸರಿನಲ್ಲಿ ಟ್ರಸ್ಟ್ ಹಾಗೂ ಸಮಿತಿ ರಚಿಸಲಾಗಿತ್ತು. ಆದರೆ ನಂತರದ ಅವಧಿಯಲ್ಲಿ ನಿರಾಸಕ್ತಿಯಿಂದಾಗಿ ರಾಷ್ಟ್ರಕವಿ ನಿವಾಸ, ಗ್ರಂಥ ಭಂಡಾರ, ಅತಿಥಿ ಗೃಹ ಹಾಗೂ ‘ಭವನಿಕಾ’ ಲಲಿತಕಲಾ ಮಂದಿರದ ಕಾಮಗಾರಿಗಳು ಪೂರ್ಣಗೊಳ್ಳದೆ ಉಳಿದಿದ್ದವು. ಸ್ಮಾರಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ನೌಕರರಿಗೆ ಸಂಬಳ ಪಾವತಿಯಾಗದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ಈ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಸ್ಮಾರಕದ ಸಮಗ್ರ ಅಭಿವೃದ್ಧಿಗೆ ಕೇರಳ ಮತ್ತು ಕರ್ನಾಟಕ ಮುಖ್ಯಮಂತ್ರಿಗಳು, ಸಚಿವರು, ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಶಾಸಕರು ಮತ್ತು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರು ಸ್ಪಂದಿಸುವಂತೆ ಶಿವರಾಮ ಕಾಸರಗೋಡು ಒತ್ತಾಯಿಸಿದ್ದರು.

ಇದೀಗ ಆಗಸ್ಟ್ 1ರಂದು ಮಂಜೇಶ್ವರದ ಗಿಳಿವಿಂಡು ರಾಷ್ಟ್ರಕವಿ ನಿವಾಸದಲ್ಲಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯ್ಲಿ, ಯೋಜನಾ ನಿರ್ದೇಶಕ ಕೆ. ತೇಜೋಮಯ, ನೂತನ ಟ್ರಸ್ಟ್ ಆಡಳಿತಾಧಿಕಾರಿ ಉದಯಕುಮಾರ್ ಇರ್ವತ್ತೂರು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಟ್ರಸ್ಟ್ ಸದಸ್ಯರಾದ ಡಾ. ಬಿ.ಎ. ವಿವೇಕ ರೈ, ಎಂ.ಜಿ. ಕಿಣಿ, ಶುಭಾಶ್ಚಂದ್ರ ಕಣ್ವತೀರ್ಥ ಹಾಗೂ ಕಾಸರಗೋಡು ಜಿಲ್ಲಾಡಳಿತದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಂಟಿ ಸಭೆ ನಡೆಸಲಾಗಿದೆ.

ಟ್ರಸ್ಟ್ ಪುನರ್ ರಚನೆಗೆ ಒತ್ತಾಯ

ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಹಾಗೂ ಸಮಿತಿಯನ್ನು ಪುನರ್ ಸಂಘಟಿಸಿ, ಕೇರಳ ಮತ್ತು ಕರ್ನಾಟಕ ಸರ್ಕಾರಗಳಿಂದ ನಾಮನಿರ್ದೇಶಿತ ನೂತನ ಸದಸ್ಯರನ್ನು ಸೇರ್ಪಡೆಗೊಳಿಸುವಂತೆ ಒತ್ತಾಯಿಸಲಾಗಿದೆ. ಈ ಕುರಿತು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಕಾಸರಗೋಡು ಕರ್ನಾಟಕ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳ ನಿಯೋಗವನ್ನು ಕೊಂಡೊಯ್ಯಲು ಉದ್ದೇಶಿಸಲಾಗಿದೆ.

ಈ ಸಂಬಂಧ ಬೆಂಗಳೂರಿನಲ್ಲಿ ಸಾಹಿತಿಗಳು, ವಿದ್ವಾಂಸರು, ಮಾಧ್ಯಮ ಪ್ರತಿನಿಧಿಗಳು, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಪ್ರಮುಖರು ಮತ್ತು ಸಾಂಸ್ಕೃತಿಕ ರಾಯಭಾರಿಗಳ ದುಂಡು ಮೇಜಿನ ಸಭೆ ನಡೆಸಿ ಮುಂದಿನ ಕಾರ್ಯಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಡಾ. ಎಂ. ವೀರಪ್ಪ ಮೊಯ್ಲಿ ಅವರನ್ನು ಬೆಂಗಳೂರಿನ ಕಚೇರಿ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಲಾಗುವುದು ಎಂದು ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

₹1 ಕೋಟಿ ವಿಶೇಷ ಅನುದಾನಕ್ಕೆ ಮನವಿ

ಗಡಿನಾಡಿನ ಪ್ರಮುಖ ಸಾಂಸ್ಕೃತಿಕ ಸ್ಮಾರಕವಾಗಿರುವ ಗಿಳಿವಿಂಡುವಿನ ಸಮಗ್ರ ಅಭಿವೃದ್ಧಿಗೆ ₹1 ಕೋಟಿ ವಿಶೇಷ ಅನುದಾನ ಒದಗಿಸುವಂತೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ. ರಾಷ್ಟ್ರಕವಿ ನಿವಾಸವನ್ನು ಕೇರಳ–ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಹಾಗೂ ಸಾಹಿತ್ಯ–ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಗಿಳಿವಿಂಡುವಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ರೂಪ ನೀಡುವ ಸಲುವಾಗಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಾಹಿತಿಗಳು, ಲೇಖಕರು, ವಿದ್ವಾಂಸರು, ಮಾಧ್ಯಮ ಪ್ರತಿನಿಧಿಗಳು, ಕಲಾವಿದರು ಹಾಗೂ ಸಂಘಟಕರ ಒಂದು ದಿನದ ಸಮಾವೇಶ ಆಯೋಜಿಸುವಂತೆಯೂ ಶಿವರಾಮ ಕಾಸರಗೋಡು ಆಗ್ರಹಿಸಿದ್ದಾರೆ.

ಮುಂದಿನ ಮೂರು ವರ್ಷಗಳ ಕಾಲ ಪ್ರತಿ ತಿಂಗಳು ಗಿಳಿವಿಂಡುವಿನಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಂಘ–ಸಂಸ್ಥೆಗಳು ನೇತೃತ್ವ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈ ಯೋಜನೆಗೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೇತೃತ್ವ ವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಸ್ಮಾರಕವನ್ನು ಸಂರಕ್ಷಿಸಿ, ಗಡಿನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಮೂಲಕ ಮುಂದಿನ ಪೀಳಿಗೆಗೆ ಅವರ ಸಾಹಿತ್ಯಿಕ ಕೊಡುಗೆಯನ್ನು ಪರಿಚಯಿಸುವ ಅಗತ್ಯವಿದೆ ಎಂದು ಶಿವರಾಮ ಕಾಸರಗೋಡು ತಿಳಿಸಿದ್ದಾರೆ.