ಕೀರ್ತಿಶೇಷ ವೇದಬ್ರಹ್ಮ ಮಾವಿನಕುಡಿಗೆ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ

0
11

ವೇದಪೌರೋಹಿತ್ಯ ಪರಂಪರೆ ಸಂಸ್ಕೃತಿಯ ಜೀವನಾಡಿ: ಡಾ. ಎಂ.ಎಸ್. ಮಹಾಬಲೇಶ್ವರ ಭಟ್

ಮಂಗಳೂರು : ವೇದ, ಸಂಸ್ಕೃತ ಮತ್ತು ಪೌರೋಹಿತ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿದೆ. ಹಿರಿಯ ವಿದ್ವಾಂಸರ ಜ್ಞಾನ ಹಾಗೂ ಅನುಭವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಜವಾಬ್ದಾರಿ ಯುವ ಪುರೋಹಿತರ ಮೇಲಿದೆ ಎಂದು ಕರ್ನಾಟಕ ಬ್ಯಾಂಕ್‌ನ ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಂ.ಎಸ್. ಮಹಾಬಲೇಶ್ವರ ಭಟ್ ಹೇಳಿದರು.

ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯ ವತಿಯಿಂದ ಪಾಂಡೇಶ್ವರದ ಗುರುನರಸಿಂಹ ಸಭಾಭವನದಲ್ಲಿ ಆಯೋಜಿಸಿದ್ದ ತನ್ನ ತಂದೆ ವೇದಬ್ರಹ್ಮ ಕೀರ್ತಿಶೇಷ ಮಾವಿನಕುಡಿಗೆ ಸುಬ್ರಹ್ಮಣ್ಯ ಭಟ್ ಅವರ ಸಂಸ್ಮರಣೆ ಹಾಗೂ ಅವರ ಹೆಸರಿನಲ್ಲಿ ನೀಡಲಾಗುವ ಯುವ ‘ಪುರೋಹಿತಶ್ರೀ ‘ ಪುರಸ್ಕಾರವನ್ನು ಸಂಸ್ಕೃತ ವಿದ್ವಾಂಸ ಪೈಕ ವೆಂಕಟರಮಣ ಭಟ್ ಅವರಿಗೆ ಗೌರವಧನದೊಂದಿಗೆ ಪ್ರಧಾನ ಮಾಡಿದ ಬಳಿಕ ಅವರು ಮಾತನಾಡಿದರು.

ಹಿರಿಯ ಸಾಧಕರನ್ನು ಗೌರವಿಸುವುದರೊಂದಿಗೆ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ನಿರಂತರತೆಗೆ ಪೂರಕವಾಗಿವೆ. ಆಧುನಿಕತೆಯ ನಡುವೆಯೂ ಯುವಜನರು ವೇದ, ಸಂಸ್ಕೃತ ಹಾಗೂ ಶಾಸ್ತ್ರಾಧ್ಯಯನದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಉದ್ಯಮಿ ರಘುನಾಥ ಸೋಮಯಾಜಿ ಮಾತನಾಡಿ, ಪುರೋಹಿತರು ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತರಾದವರಲ್ಲ. ಕುಟುಂಬ ಮತ್ತು ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ, ಸಂಸ್ಕಾರ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಮಾರ್ಗದರ್ಶಕರಾಗಿದ್ದಾರೆ. ಅವರ ಸೇವೆಯನ್ನು ಗುರುತಿಸುವುದು ಸಮಾಜದ ಕರ್ತವ್ಯ, ಎಂದು ಹೇಳಿದರು.

ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಪೈಕ ವೆಂಕಟರಮಣ ಭಟ್, ಮಾವಿನಕುಡಿಗೆ ಸುಬ್ರಹ್ಮಣ್ಯ ಭಟ್ ಪೌರೋಹಿತ್ಯ ಪರಂಪರೆಗೆ ಆದರ್ಶ ಗುರುವಾಗಿ, ಮಾರ್ಗದರ್ಶಕರಾಗಿ ತನ್ನ ಜ್ಞಾನವನ್ನು ಶಿಷ್ಯ ಸಮುದಾಯಕ್ಕೆ ನೀಡಿ ಬೆಳೆಸಿದವರು ಅವರ ಹೆಸರಿನಲ್ಲಿ ನೀಡಿದ ಈ ಗೌರವವು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಂಸ್ಕೃತ ಮತ್ತು ವೇದಜ್ಞಾನವನ್ನು ಯುವಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತೇನೆ, ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ, ಪೌರೋಹಿತ್ಯವು ಕೇವಲ ಒಂದು ವೃತ್ತಿಯಲ್ಲ; ಅದು ಸಮಾಜವನ್ನು ಧರ್ಮ, ಸಂಸ್ಕಾರ ಮತ್ತು ಸನ್ಮಾರ್ಗದಲ್ಲಿ ಮುನ್ನಡೆಸುವ ಪವಿತ್ರ ಸೇವೆಯಾಗಿದೆ. ಗುರುಗಳಿಂದ ಪಡೆದ ವೇದಜ್ಞಾನ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಪುರೋಹಿತರ ಮೇಲಿದೆ. ಹಿರಿಯ ಪುರೋಹಿತರ ತಪಸ್ಸು, ಜ್ಞಾನ ಮತ್ತು ಸಮಾಜಮುಖಿ ಸೇವೆಯನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ, ಎಂದರು.

ಯುವ ಪುರೋಹಿತರು ಶಾಸ್ತ್ರಜ್ಞಾನದ ಜೊತೆಗೆ ಕಾಲದ ಅಗತ್ಯಗಳಿಗೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅವರ ಪ್ರತಿಭೆ ಮತ್ತು ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಯುವ ಪುರೋಹಿತಶ್ರೀ ಪುರಸ್ಕಾರವನ್ನು ನೀಡಲಾಗುತ್ತಿದೆ. ಈ ಗೌರವವು ಮತ್ತಷ್ಟು ಯುವಕರಿಗೆ ವೇದ, ಸಂಸ್ಕೃತ ಮತ್ತು ಪೌರೋಹಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಬೇಕು. ಕೂಟ ಮಹಾಜಗತ್ತು ಮಂಗಳೂರು ಅಂಗಸAಸ್ಥೆಯು ಮುಂದೆಯೂ ಗುರುಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸಲಿದೆ, ಎಂದು ತಿಳಿಸಿದರು.

ವೇದಬ್ರಹ್ಮ ಮಾವಿನಕುಡಿಗೆ ಸುಬ್ರಹ್ಮಣ್ಯ ಭಟ್ ಧರ್ಮಪತ್ನಿ ಶಾರದಮ್ಮ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಸಂತ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಶಶಿಪ್ರಭಾ ಐತಾಳ್ ಸನ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯರು ವಂದಿಸಿದರು. ಕೋಶಾಧಿಕಾರಿ ಪದ್ಮನಾಭ ಮಯ್ಯ , ಅನ್ನಪೂರ್ಣ ಮಹಾಬಲೇಶ್ವರ ಭಟ್ ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ಸದಸ್ಯೆಯರು ಮೊದಲಾದವರು ಉಪಸ್ಥಿತರಿದ್ದರು.