ಮಂಗಳೂರು : ಹೆಸರಾಂತ ಶೆಟ್ಟಿ ಟ್ರೇಡರ್ಸ್ ಸಂಸ್ಥೆಯ ಮಾಲಕ ಹಾಗೂ ಸಮಾಜಮುಖಿ ವ್ಯಕ್ತಿತ್ವದ ಧರ್ಮೇಂದ್ರ ಶೆಟ್ಟಿ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ವ್ಯಾಪಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಧರ್ಮೇಂದ್ರ ಶೆಟ್ಟಿ ಅವರು ಸಮಾಜಮುಖಿ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮಾಜದ ವಿವಿಧ ವರ್ಗಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಅವರು, ವಿಶೇಷವಾಗಿ ಯುವಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ತಮ್ಮ ಸರಳತೆ ಹಾಗೂ ಸ್ನೇಹಪರ ಸ್ವಭಾವದಿಂದಾಗಿ ಹಲವಾರು ಯುವಕರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.
ಬಹರೈನ್ನಲ್ಲಿಯೂ ಹಲವು ವರ್ಷಗಳ ಕಾಲ ವ್ಯವಹಾರ ನಡೆಸಿದ್ದ ಅವರು, ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಮರಳಿದ್ದರು ಎನ್ನಲಾಗಿದೆ.
ಅವರ ನಿಧನಕ್ಕೆ ಸಚಿವರಾದ ಯು.ಟಿ. ಖಾದರ್, ಇಫ್ತಿಕಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಧರ್ಮೇಂದ್ರ ಶೆಟ್ಟಿ ಅವರ ಅಗಲಿಕೆಯಿಂದ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ದುಃಖಿತರಾಗಿದ್ದಾರೆ.

