ಮನುಷ್ಯನವರ್ತನೆ ಅವನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ -ಶ್ರೀನಿವಾಸಸಪಲ್ಯ
ಬಂಟ್ವಾಳ : ತಾಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರಿನಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಹಾಗೂ ನವೀಕೃತ ಸುಮಂಗಲ ಕಲ್ಯಾಣ ಮಂಟಪದ ಲೋಕಾರ್ಪಣೆ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ನವೀಕೃತ ಸುಮಂಗಲ ಕಲ್ಯಾಣ ಮಂಟಪವನ್ನು ಸಾಫಲ್ಯ ಸೇವಾ ಸಂಘ ಮುಂಬೈ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ಮನುಷ್ಯನ ವರ್ತನೆಯೇ ಅವನ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಉತ್ತಮ ಸಂಸ್ಕಾರ, ಶಿಸ್ತು ಮತ್ತು ನಡತೆಯ ಮೂಲಕವೇ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು. ಕೇವಲ ಪ್ರಮಾಣಪತ್ರ ಅಥವಾ ಪದವಿಯಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.
ಭಾರತ ರತ್ನ ಹಾಗೂ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬಾಲ್ಯದ ಕಠಿಣ ಪರಿಶ್ರಮ, ಜೀವನದ ಅಡೆತಡೆಗಳನ್ನು ಮೀರಿ ಸಾಧಿಸಿದ ಯಶಸ್ಸು ಹಾಗೂ ಅವರ ನಿಷ್ಠೆಯ ಬದುಕನ್ನು ಉದಾಹರಣೆಯಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.
ಅಲ್ಲದೆ, ದಿವಂಗತ ಮಂಜುನಾಥ ಸಪಳಿಗ, ರಘು ಸಪಳಿಗೆ ಹಾಗೂ ಜಿನಪ್ಪ ಟೈಲರ್ ಅವರ ಸಮಾಜದ ಮೇಲಿನ ಕಾಳಜಿ ಮತ್ತು ಸಮಾಜದ ಏಳಿಗೆಗಾಗಿ ಹಾಕಿದ ಭದ್ರ ಅಡಿಪಾಯವನ್ನು ಸ್ಮರಿಸಿದರು. ಸಂಘದ ಯುವ ವಿಭಾಗ, ಮಹಿಳಾ ವಿಭಾಗ ಹಾಗೂ ಸುಮಂಗಲ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಮಾಜದ ಅಭಿವೃದ್ಧಿ ಮತ್ತು ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದನ್ನು ಪ್ರಶಂಸಿಸಿದರು.
ಕಾರ್ಯಕ್ರಮವನ್ನು ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮಾಜಿ ಮೈಸೂರು ಮಹಾಪೌರ ಅನಂತ್ ಮೈಸೂರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಗಾಣಿಗ ಸಮಾಜವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಟಾಡಿ ಮಾತನಾಡಿ, ವಿಶ್ವಮಟ್ಟದ ನಾಯಕ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶಕ್ಕೆ ನೀಡಿದ ಗಾಣಿಗ ಸಮಾಜದ ಕೊಡುಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಗಾಣಿಗ, ಜಿಲ್ಲಾ ಸಂಘದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಬಿಜೆಪಿ ವಕ್ತಾರ ಮಾಧವ್ ಮಾವೆ, ಮುಂಬೈ ಉದ್ಯಮಿ ವಸಂತ್ ಜಿ. ಸಪಲ್ಯ ಕುಂಜಾರು ಹಾಗೂ ಜನಾರ್ದನ ಅರ್ಕುಳ ಶುಭ ಹಾರೈಸಿದರು.
ಸುಮಂಗಲ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲಡ್ಕ, ಪ್ರಮುಖರಾದ ಕೇಶವ ಅತ್ತಾವರ, ವೆಂಕಟೇಶ್ ಅತ್ತಾವರ, ಸಚಿನ್ ಮೆಲ್ಕಾರ್, ನರ್ಸಪ್ಪ, ವೇದವ ಗಾಣಿಗ, ಭುವನೇಶ ಮೊಗರ್ನಾಡು, ಆಶಾ ವೇದವ ಗಾಣಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿದರು.
ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

