ಪ್ರೇರಣಾ ಶಾಲೆಯಲ್ಲಿ ” ಆಟಿಕೂಟ ಸಂಭ್ರಮ “

0
17

ಮೂಡುಬಿದಿರೆ : ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ” ಆಟಿಕೂಟ ಸಂಭ್ರಮ ” ವು ಜರುಗಿತು . ಹನುಮಗಿರಿ ಮೇಳದ ಸುಪ್ರಸಿದ್ಧ ಭಾಗವತರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರು ದೀಪ ಪ್ರಜ್ವಲನೆ ಮಾಡಿ ತುಳನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಕಳಸೆಯಲ್ಲಿ ಇರಿಸಿದ ಭತ್ತದ ರಾಶಿಯ ಮಧ್ಯೆ ಇರುವ ತೆಂಗಿನ ಕೊಂಬನ್ನು ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು .

” ತುಳು ಕ್ಯಾಲೆಂಡರ್ ನ ಆಟಿ ತಿಂಗಳು ತುಳುವರ ಸಂಸ್ಕ್ರತಿಯ ಪ್ರತೀಕ . ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ದೊರಕುವ ವಸ್ತುಗಳನ್ನು ಆಹಾರವಾಗಿ ಬಳಸುತ್ತೇವೆ . ಆಟಿ ಅಮವಾಸ್ಯೆ ದಿನ ಸೇವಿಸುವ ಪಾಲೆಮರದ ತೊಗಟೆಯಿಂದ ತಯಾರಿಸುವ ಕಷಾಯ ಸರ್ವರೋಗಗಳನ್ನು ಪರಿಹರಿಸುವ ಶಕ್ತಿ ಹೊಂದಿದೆ . ಸ್ವರ್ಗಲೋಕದ ವೈದ್ಯರಾದ ಅಶ್ವಿನೀ ದೇವತೆಗಳು ಆಟಿ ಅಮಾವಾಸ್ಯೆಯಂದು ಪಾಲೆಮರದಲ್ಲಿ ಅನುಸಂಧಾನಗೊಳ್ಳುತ್ತಾರೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿರುವ ಕಾರಣ , ಈ ಕಷಾಯವು ಸರ್ವ ರೋಗಹಾರಕ ಗುಣ ಹೊಂದಿದೆ ” ಎಂದು ನುಡಿದರು .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೇರಣಾ ಶಾಲೆಯ ಸಂಚಾಲಕರಾದ ಎಂ.ಶಾಂತರಾಮ ಕುಡ್ವರು , ” ಆಟಿ ತಿಂಗಳು ಎಂಬುದು ಅನಿಷ್ಟದ ತಿಂಗಳಲ್ಲ , ಬದಲಾಗಿ ಹಿಂದಿನ ಕಾಲದಲ್ಲಿ , ಜೋರಾದ ಮಳೆಯಿಂದ ಕೆಲಸವಲ್ಲದೇ ಅನುಭವಿಸುತ್ತಿದ್ದ ಕಷ್ಟದ ತಿಂಗಳು . ಆಟಿ ತಿಂಗಳು ಆನೆಯಂತೆ ಸಾಗಿದರೆ , ಸೋಣ ತಿಂಗಳು ಕುದುರೆಯಂತೆ ಸಾಗುತ್ತದೆ ಎಂಬ ತುಳುನಾಡಿನ ಗಾದೆಯಿದೆ .

ಅಂದರೆ , ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂದರೆ ಕಷ್ಟದ ಕಾಲವಾದ ಕಾರಣ , ಅದು ಆನೆಯಂತೆ ನಿಧಾನವಾಗಿ ಸಾಗುವ ಹಾಗೆ ಭಾಸವಾದರೆ , ಸೋಣ ( ಶ್ರಾವಣ ) ತಿಂಗಳಲ್ಲಿ ಹಬ್ಬಗಳ ಸಾಲೇ ಇರುವ ಕಾರಣ , ಕುದುರೆಯಂತೆ ವೇಗವಾಗಿ ಸಾಗುವ ಹಾಗೇ ಭಾಸವಾಗುತ್ತದೆ ” ಎಂದು ನುಡಿದರು .

ಪ್ರೇರಣಾ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವತ್ಸಲಾ ರಾಜೇಶ್ ರವರು ಅತಿಥಿಗಳನ್ನು ಸ್ವಾಗತಿಸಿದರು . ಶಿಕ್ಷಕಿ ಪ್ರಿಯಾರವರು ಕಾರ್ಯಕ್ರಮ ನಿರೂಪಿಸಿದರೆ , ಶಿಕ್ಷಕಿ ಗ್ರೀಷ್ಮಾರವರು ಧನ್ಯವಾದ ಸಲ್ಲಿಸಿದರು . ರವಿಚಂದ್ರ ಕನ್ನಡಿಕಟ್ಟೆಯವರ ಧರ್ಮಪತ್ನಿ ಶುಭಾ ಹಾಗೂ ಸೇವಾಂಜಲಿ ಎಜುಕೇಶನ್ ಟ್ರಸ್ಟ್ ನ ಟ್ರಸ್ಟೀ ಡಾ.ಆನಂದ ಕಾರ್ಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಕಾರ್ಯಕ್ರಮದ ವೇದಿಕೆಯನ್ನು ತುಳುನಾಡಿನ ಸಂಸ್ಕ್ರತಿ ಬಿಂಬಿಸುವ ರೀತಿಯಲ್ಲಿ ಶಿಕ್ಷಕ , ಶಿಕ್ಷಕಿ , ಶಿಕ್ಷಕೇತರ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿಗಳು ಅಲಂಕರಿಸಿದ್ದುದು ವಿಶೇಷವಾಗಿತ್ತು . ತುಳುನಾಡಿನ ಪಾರಂಪರಿಕ ಸಲಕರಣೆಗಳಾದ ಕಳಸಿಗೆ , ಕತ್ತಿ , ಹಲ್ಲುಕತ್ತಿ , ಪರ್ಕತ್ತಿ , ಸಂಬರಮರಾಯಿ , ತಟ್ಟಿ , ಬಲಾಯಿ , ಓಡಮರಾಯಿ , ಕೈಲ್ , ಬಿಸಲೆ , ಸೇರು – ಪಾವು , ಕಾವಲಿ ಹಾಗೂ ತುಳುನಾಡಿನ ಆಹಾರ ವಸ್ತುಗಳಾದ ಸಿಯಾಳ , ತೆಂಗಿನಕಾಯಿ , ಕಣಿಲೆ , ಹಲಸಿನ ಹಣ್ಣು , ಬಾಳೆಹಣ್ಣು , ವಿವಿಧ ಆಯುರ್ವೇದ ಸಸ್ಯಗಳು , ಆಟಿಕೆಯ ಚೆನ್ನೆದಮಣೆಯನ್ನು ವೇದಿಕೆಯ ಮುಂಭಾಗದಲ್ಲಿ ಅಂದವಾಗಿ ಜೋಡಿಸಲಾಗಿತ್ತು .

ರವಿಚಂದ್ರ ದಂಪತಿಗಳಿಗೆ ಸಂಚಾಲಕರಾದ ಎಂ.ಶಾಂತರಾಮ ಕುಡ್ವರು ಶಾಲು ಹೊದಿಸಿ , ಸ್ಮರಣಿಕೆ ನೀಡಿ ಶಾಲೆಯ ಪರವಾಗಿ ಗೌರವಿಸಿದರು . ನಂತರದಲ್ಲಿ ಶಾಲಾ ವಿದ್ಯಾರ್ಥಿಗಳ ಪೋಷಕರು ಮನೆಯಲ್ಲಿಯೇ ತಯಾರಿಸಿದ ತುಳುನಾಡಿನ ವಿವಿಧ ಪದಾರ್ಥ , ಖಾದ್ಯಗಳು , ಸಿಹಿತಿನಿಸುಗಳು , ಮೂಡೆ , ಪತ್ರೋಡೆ , ಹಲಸಿನ ಗಟ್ಟಿ , ಅರಸಿನ ಎಲೆಯ ಗಟ್ಟಿ , ಕಡುಬು , ಚಟ್ನಿಯೊಂದಿಗೆ ಎಲ್ಲಾ ವಿದ್ಯಾರ್ಥಿಗಳು , ಶಿಕ್ಷಕ – ಶಿಕ್ಷಕಿ , ಶಿಕ್ಷಕೇತರ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಸಹಭೋಜನ ಮಾಡಿದರು .