ಡೇವಿಡ್ ಡಿ’ಸೋಜಾ ಶೂಟೌಟ್ ಪ್ರಕರಣ : ಮತ್ತಿಬ್ಬರು ಪ್ರಮುಖ ಆರೋಪಿಗಳ ಬಂಧನ

0
54

ಉಡುಪಿ : ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿ’ಸೋಜಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ಎರ್ಮಾಳ್ ನಿವಾಸಿ ಕಿಶೋರ್ ಪೂಜಾರಿ (47) ಹಾಗೂ ಕುತ್ಯಾರ್ ನಿವಾಸಿ ಸದಾನಂದ ದೇವಾಡಿಗ (45) ಎಂದು ಗುರುತಿಸಲಾಗಿದೆ.

ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಕಿಶೋರ್ ಪೂಜಾರಿ ಹಣವನ್ನು ಸದಾನಂದ ದೇವಾಡಿಗನಿಗೆ ವರ್ಗಾವಣೆ ಮಾಡಿದ್ದಾನೆ. ಬಳಿಕ ಸದಾನಂದ ಆ ಹಣವನ್ನು ಮೂವರು ಸುಪಾರಿ ಕೊಲೆಗಾರರಿಗೆ ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಹಣದ ವಹಿವಾಟು, ಆರೋಪಿಗಳ ನಡುವಿನ ಸಂಪರ್ಕ ಹಾಗೂ ಶೂಟೌಟ್ ಪ್ರಕರಣದಲ್ಲಿ ಪ್ರತಿಯೊಬ್ಬರ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಕಿಶೋರ್ ಪೂಜಾರಿ ಹಾಗೂ ಸದಾನಂದ ದೇವಾಡಿಗ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಒಟ್ಟು ಏಳಕ್ಕೆ ಏರಿಕೆಯಾಗಿದೆ.

ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.