ತುಳುನಾಡು, ಅದರಲ್ಲೂ ಮುಲ್ಕಿ, ಹೆಜಮಾಡಿ, ಉಡುಪಿ, ಮಂಗಳೂರಿನಲ್ಲಿ ಕೋರ್ದಬ್ಬು ಕಂಬೆರ್ಲು ದೈವದ ಪಾತ್ರಿಯಾಗಿ ಪ್ರಸಿದ್ಧಿಯಾಗಿ, ಕಳೆದ 37 ವರ್ಷಗಳಿಂದ ದೈವದ ಸೇವೆಯನ್ನು ನಡೆಸುತ್ತಾ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾದ ಪ್ರಸ್ತುತ ನಂದಿಕೂರು ನಿವಾಸಿಯಾದ ಶ್ರೀ ಶೀನ ಪಾತ್ರಿ ಇವರಿಗೆ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್(ರಿ.) ಇವರ ವಾರ್ಷಿಕ ತುಳುವ ಜವನೆರೆ ಆಯನ,ತುಳುನಾಡ್ ಕಾನ್ಕ್ಲೇವ್ – 2026ರ ಜೀವಮಾನದ ಸಾಧನಾ ಪುರಸ್ಕಾರ “ತುಳುವಾಲ ಕುಲಸಿರಿ” ಪ್ರಶಸ್ತಿಯನ್ನು ತಾರೀಕು 23 ಆಗಸ್ಟ್‌ರಂದು ಮುಲ್ಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ನೀಡುವುದೆಂದು ಘೋಷಿಸಲಾಗಿದೆ.
ಶ್ರೀ ಶೀನ ಪಾತ್ರಿ ಇವರು ಸುಮಾರು 37 ವರ್ಷಗಳಿಂದ ಬಬ್ಬು ಸ್ವಾಮಿಯ ದರ್ಶನ ಸೇವೆಯನ್ನು ಮಾಡುತ್ತಿದ್ದು, ಬಬ್ಬುಸ್ವಾಮಿಯ ಚರಿತ್ರೆಯಾದ “ಬೈದ”ವನ್ನು ಬಲ್ಲವರಾಗಿ ಹಲವಾರು ಕಡೆ ಸೇವೆಯನ್ನು ನಡೆಸಿರುತ್ತಾರೆ. ಕಚ್ಚೂರು ಮಾಲ್ದಿದೇವಿ ಮತ್ತು ಬಬ್ಬುಸ್ವಾಮಿಯ ಮೂಲಕ್ಷೇತ್ರ ಕಚ್ಚೂರಿನಲ್ಲೂ ಬಬ್ಬು ಸ್ವಾಮಿಯ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಮುಲ್ಕಿ ಮಟ್ಟು ಗ್ರಾಮದ ಕೂಡುಕಟ್ಟಿನವರಾದ ಇವರು ಮಟ್ಟು ಮತ್ತು ಸುತ್ತಮುತ್ತಲಿನ ಬಬ್ಬುಸ್ವಾಮಿ ದೈವಸ್ಥಾನಗಳಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿರುತ್ತಾರೆ. ಇಂತಹ ಒಬ್ಬ ನಿಷ್ಠಾವಂತ ಹಿರಿಯ ವ್ಯಕ್ತಿಯನ್ನು ಗುರುತಿಸಿ ಜೀವಮಾನದ ಸಾಧನಾ ಪ್ರಶಸ್ತಿ ನೀಡುವುದು ಸಂತಸ ತಂದಿದೆ ಎಂದು ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌ನ ಪ್ರಶಸ್ತಿ ಆಯ್ಕೆ ಸಮಿತಿಯವರು ತಿಳಿಸಿದ್ದಾರೆ.
ತುಳು ಭಾಷೆ, ಸಂಸ್ಕೃತಿ ಮತ್ತು ತುಳುತ್ವದ ಉಳಿವಿಗಾಗಿ ಸಾಹಿತ್ಯ ಮತ್ತು ದಾಖಲಾತ್ಮಕ ನೆಲೆಯಲ್ಲಿ ಕಳೆದ 4 ವರ್ಷಗಳಿಂದ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರುವ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಎಂಬ ಹೆಸರಿನ ಸಂಸ್ಥೆ, ಪ್ರತೀ ವರ್ಷ ” ತುಳುನಾಡ್ ಕಾನ್ಕ್ಲೇವ್ ” ಎಂಬ ವಾರ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು, ತುಳು ಸಾಹಿತ್ಯ ಕಾರ್ಯಾಗಾರ, ತುಳು ಲಿಪಿಯ ಪುನರುಜ್ಜೀವನ, ತುಳು ಪುಸ್ತಕಗಳ ಬಿಡುಗಡೆ, ಎಲೆಮರೆಯ ಕಾಯಿಯಂತಿರುವ ತುಳುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ತುಳುವನ್ನು ಮುಂದಿನ ಪೀಳಿಗೆಗೆ ಪಸರಿಸುವ ಕೆಲಸವನ್ನು ಶಾಲಾ ಕಾಲೇಜುಗಳ ಸಹಯೋಗದಿಂದ ಸದ್ದಿಲ್ಲದೆ ನಡೆಸುತ್ತಾ ಬಂದಿದೆ. ಈ ಬಾರಿಯೂ ತುಳು ಸಾಹಿತ್ಯದ ಉಳಿವಿಗಾಗಿ, ಮಂದಾರ ಕೇಶವ ಭಟ್ ಇವರು ರಚಿಸಿರುವ ಉತ್ಕೃಷ್ಟ ಕೃತಿ “ಬೀರದ ಬೊಳ್ಪು”, ಹರ್ಷ ತುಳುನಾಡ್ ಇವರ ಅನುಭವದ ಬರಹಗಳ ಗೊಂಚಲಾದ “ವಜ್ರದಾರಗೆ”, ಸುಶಾನ್ ಇವರ ಸಂಶೋಧನಾ ಕೃತಿ ಕಾಂತಬಾರೆ ಬೂದಬಾರೆ, ಅಮ್ಮನ ಬಗ್ಗೆ ಅನೇಕ ಲೇಖಕರಿಂದ ಸಂಗ್ರಹಿಸಿದ ಬರಹಗಳ ಒಟ್ಟು ಕೃತಿ “ಅಪ್ಪೆ”, ಸುಮಾರು 2000 ಪ್ರತಿಗಳು ಮಾರಾಟವಾದ ತುಳು ಲಿಪಿ ಕಲಿಯುವ ಪುಸ್ತಕವಾದ “ಜೀಟಿಗೆ”ಯ ಮೂರನೇ ಮುದ್ರಣ “ತುಳುನಾಡ್ ಕಾನ್ಕ್ಲೇವ್ -2026” ರಲ್ಲಿ ಬಿಡುಗಡೆಯಾಗಲಿದೆ.
ಆಗಸ್ಟ್ 23 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5-30 ಗಂಟೆವರೆಗೆ,ಮುಲ್ಕಿಯ ಸರಕಾರಿ ಪದವಿ ಪೂರ್ವ ಕಾಲೇಜ್(ಜೂನಿಯರ್ ಕಾಲೇಜ್)ನಲ್ಲಿ ಸತತವಾಗಿ ಅನೇಕ ಕಾರ್ಯಾಗಾರಗಳು ನಡೆಯಲಿವೆ, ತುಳುವರೆಲ್ಲರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.

