ತುಳುನಾಡಿನ ಸಂಸ್ಕೃತಿ ಸಂಸ್ಕಾರ ಇಡೀ ದೇಶಕ್ಕೆ ಹೆಮ್ಮೆ: ಸೂರಜ್ ನಾಯಕ್ ಸೋನಿ

0
1

ತುಳುನಾಡು ರಕ್ಷಣಾ ವೇದಿಕೆಯಿಂದ ಆಟಿಡೊಂಜಿ ದಿನ; ತುಳುನಾಡು ವಾರ್ತೆ ಟಿವಿ ಚಾನೆಲ್ ಲೋಕಾರ್ಪಣೆ

ಉಡುಪಿ: ತುಳುನಾಡಿನ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ ಹಾಗೂ ಜನಪದ ಕಲೆಗಳು ಇಡೀ ದೇಶಕ್ಕೆ ಹೆಮ್ಮೆ ತರುವಂತಹವು. ತುಳುವರು ತಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಜನಪದ ಪರಂಪರೆಯನ್ನು ಇಂದಿಗೂ ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಜೆಡಿಎಸ್‌ ಮುಖಂಡ ಸೂರಜ್ ನಾಯಕ್ ಸೋನಿ ಹೇಳಿದರು.
ತುಳುನಾಡು ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಆಯೋಜಿಸಲಾಗಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಹೊಂಬಾಳೆ ಅರಳಿಸಿ ಅವರು ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಸಂಪ್ರದಾಯ, ಪದ್ಧತಿ, ಸಂಸ್ಕಾರ ಹಾಗೂ ಆಚಾರ-ವಿಚಾರಗಳು ಜಗತ್ತೇ ಮೆಚ್ಚುವಂತಿವೆ. ರಾಜ್ಯ ಸರ್ಕಾರ ತುಳು ಭಾಷೆಗೆ ಪ್ರಾಧಾನ್ಯತೆ ನೀಡುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಪೂರ್ವಜರು ಬೆಳೆಸಿಕೊಂಡು ಬಂದ ತುಳುನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿಜೆಪ್ಪು, ತುಳುನಾಡು ವಾರ್ತೆ ಸಂಪಾದಕರು ಪುನೀತ್ ಮುಂಡ್ಕೂರು,ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಇಂಟಕ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ವೈದ್ಯ ಡಾ. ವಿಜಯೇಂದ್ರ, ಉದ್ಯಮಿ ಚೇತನ್ ಶೆಟ್ಟಿ, ವರ್ತಕರ ಸಂಘದ ಪ್ರಕಾಶ್ ಸಜ್ಜನ್, ಉದ್ಯಮಿ ವಿಲ್ಸನ್ ಫರ್ನಾಂಡಿಸ್, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗಲಕ್ಷ್ಮೀ ಸುಬ್ರಹ್ಮಣ್ಯ ನಗರ, ಗೌರವ ಸಲಹೆಗಾರ ಸುಧಾಕರ ಅಮೀನ್, ಕಾಪು ಅಧ್ಯಕ್ಷೆ ಅನುಸೂಯ ಶೆಟ್ಟಿ ಹಾಗೂ ಕಾರ್ಮಿಕ ಸಂಘಟನೆ ಅಧ್ಯಕ್ಷ ಜಯ ಪೂಜಾರಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ನೇರಿ ಕರ್ನೇಲಿಯೋ, ರವಿ ಕಟಪಾಡಿ, ಈಶ್ವರ್ ಮಲ್ಪೆ, ಜೇಸನ್ ಡಯಾಸ್, ಪ್ರಮೋದ್ ಕುಮಾರ್ ಶೆಟ್ಟಿ, ಶಿಲ್ಪಿ ದಿನೇಶ್ ಆಚಾರ್ಯ, ಶಶಾಂಕ್ ಸಾಲ್ಯಾನ್, ಯಕ್ಷಗುರು ಗಣೇಶ್ ಕುಮಾರ್ ಚೇರ್ಕಾಡಿ, ರಫೀಕ್ ಕಲ್ಯಾಣಪುರ, ಸ್ವಪ್ನಾ ಸುರೇಶ್ ಹಾಗೂ ಸಾಯಿ ಸೋಷಿಯಲ್ ಸರ್ವಿಸ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ತುಳುನಾಡಿನ ಹೆಮ್ಮೆಯ ‘ತುಳುನಾಡು ವಾರ್ತೆ’ ಪತ್ರಿಕೆ ಅರ್ಪಿಸುವ ‘ತುಳುನಾಡು ವಾರ್ತೆ ಟಿವಿ ಚಾನೆಲ್’ ಲೋಕಾರ್ಪಣೆಗೊಂಡಿತು. ತುಳುನಾಡು ರಕ್ಷಣಾ ವೇದಿಕೆಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶರತ್ ರಾಜ್ ಆರೂರು ನಿರ್ದೇಶನದಲ್ಲಿ ‘ಆಟಿದ ಜನಪದ ಐಸಿರಿ’ ಕಾರ್ಯಕ್ರಮ ನಡೆಯಿತು. ಲಾವಣ್ಯ ಪ್ರಾರ್ಥಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಸ್ವಾಗತಿಸಿದರು. ಕಾರ್ಮಿಕ ಘಟಕದ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.