ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ – ಡಾ. ರಂಜನ್ ಅವರಿಗೆ ಪ್ರತಿಷ್ಠಿತ ‘ನ್ಯಾಷನಲ್ ರೋಟರಿ ಚಾಂಪಿಯನ್ ಪ್ರಶಸ್ತಿ’

0
24

ಮಂಗಳೂರು : ನಗರದ ಜಿಲ್ಲಾ ವೆನ್ಹಾಕ್ ಆಸ್ಪತ್ರೆಯ ಅರಿವಳಿಕೆ ವಿಭಾಗದ ಹಿರಿಯ ತಜ್ಞರು, ಕೆಎಂಸಿ ವೈದ್ಯಕೀಯ ಕಾಲೇಜಿನ ಅರಿವಳಿಕೆ ಶಾಸ್ತ್ರ ಪ್ರಾಧ್ಯಾಪಕರು ಹಾಗೂ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ. ರಂಜನ್ ಅವರಿಗೆ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯು ಪ್ರಾಯೋಜಿಸುವ ಪ್ರತಿಷ್ಠಿತ “ನ್ಯಾಷನಲ್ ರೋಟರಿ ಚಾಂಪಿಯನ್ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಲಾಯಿತು.

ಗೋವಾ ರಾಜ್ಯದ ಪಂಜಿಮ್ ನಗರದ ‘ಹೋಟೆಲ್ ನೋವಾಟೆಲ್ ಸಭಾಂಗಣದಲ್ಲಿ ದಿನಾಂಕ 14.08.2026 ರಂದು ಜರುಗಿದ ರೋಟರಿ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷರಾದ, ನೈಜೀರಿಯಾ ರಾಷ್ಟ್ರ ಮೂಲದ ಒಲಯಂಕಾ ಹಕೀಂ ಬಾಬಲೋಲಾ ಅವರು ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಿದರು.

ಡಾ. ರಂಜನ್‌ ಅವರು ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಗೆ ಸಲ್ಲಿಸಿದ ಅನುಪಮ ಹಾಗೂ ನಿಸ್ವಾರ್ಥ ಸೇವೆ, ಪ್ರದರ್ಶಿಸಿದ ಅಸಾಧಾರಣ ನಾಯಕತ್ವ ಗುಣ, ಸಾಧಿಸಿದ ಸಾಧನೆಗಳು, ಅಮೂಲ್ಯ ಕೊಡುಗೆಗಳು ಮತ್ತು ಸ್ನೇಹಿತ ಮೀರಿದ ಸೇವೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.

ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಅಧ್ಯಕ್ಷರ ಪತ್ನಿ ಪ್ರೆಸ್ಸಿ ಬಾಬಲೋಲ, ರೋಟರಿ ಅಂತಾರಾಷ್ಟ್ರೀಯ ಜಿಲ್ಲಾ 3170ರ ಗವರ್ನರ್, ಪಂಜಿಂ ನಗರ ಮೂಲದ ಡಾ. ಲೆನ್ನಿ ಡಕೋಸ್ಮಾ, ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ನಿರ್ದೇಶಕರಾದ ಕೆ.ಪಿ. ನಾಗೇಶ್, ಮಾಜಿ ನಿರ್ದೇಶಕರಾದ ವೆಂಕಟೇಶ್, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರ ನಿಯೋಜಿತ ಗವರ್ನರ್ ಸೂರ್ಯನಾರಾಯಣ, ಸದಸ್ಯತ್ವ ಅಭಿವೃದ್ಧಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ, ಮೈಸೂರು ನಗರ ಮೂಲದ ಡಾ. ಕೇಶವ್ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರಾದ ಡಾ. ರಂಜನ್ ಅವರಿಗೆ ರೋಟರಿ ಜಿಲ್ಲಾ ಆಡಳಿತ ಸಮಿತಿಯ ಪದಾಧಿಕಾರಿಗಳು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.