- ಮಂದಾರ ರಾಜೇಶ್ ಭಟ್
ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಮಂಗಳೂರು ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಸೈಂಟ್ ಅಲೋಶಿಯಸ್ ಪಿ.ಯು. ಕಾಲೇಜಿನ ಲೋಯೆಲ್ಲಾ ಸಭಾಂಗಣದಲ್ಲಿ ಅಕ್ಟೋಬರ್ 8, 2026ರಂದು ಹಮ್ಮಿಕೊಳ್ಳಲಾಗಿದ್ದ “ಆಸಿಡ್ ದಾಳಿಯ ಸಂತ್ರಸ್ತರ ರಕ್ಷಣೆಯ ಕುರಿತು ಅರಿವು ಕಾರ್ಯಾಗಾರ”ವು ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿತು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಯುತ ಮಾನು ಕೆ.ಎಸ್. ಅವರು ಈ ಮಹತ್ವದ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂತ್ರಸ್ತರ ರಕ್ಷಣೆ ಕುರಿತು ವಿಶೇಷ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸ್ವಯಂಸೇವಕರು ಹಾಗೂ ಪಾಲ್ಗೊಂಡಿದ್ದ ಎಲ್ಲರಿಗೂ ಕಾನೂನು ಹಾಗೂ ಇಲಾಖಾ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿಕೊಡಲಾಯಿತು.
ಆಸಿಡ್ ದಾಳಿಗೆ ಸಂಬಂಧಿಸಿದ ಕಾನೂನುಗಳು
ಭಾರತೀಯ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥರಿಗೆ ವಿಧಿಸಬಹುದಾದ ಕಠಿಣ ಶಿಕ್ಷೆಗಳು ಮತ್ತು ಸಂತ್ರಸ್ತರ ಹಕ್ಕುಗಳ ರಕ್ಷಣೆಗೆ ಇರುವ ಕಾನೂನು ಚೌಕಟ್ಟಿನ ಕುರಿತು ಮಾಹಿತಿ ನೀಡಲಾಯಿತು.

ಅನಧಿಕೃತ ಆಸಿಡ್ ಮಾರಾಟಗಾರರಿಗೆ ವಿಧಿಸಬಹುದಾದ ಶಿಕ್ಷೆಗಳು ಮತ್ತು ದಂಡ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಹಾಗೂ ಪ್ರಚಲಿತ ಕಾನೂನುಗಳ ಪ್ರಕಾರ, ಪರವಾನಗಿ ಇಲ್ಲದೆ ಅಥವಾ ಅನಧಿಕೃತವಾಗಿ ಆಸಿಡ್ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪರವಾನಿಗೆ ಇಲ್ಲದೆ ಆಸಿಡ್ ಮಾರಾಟ ಮಾಡುವಂತಿಲ್ಲ ಪರವಾನಿಗೆ ಹೊಂದಿದ ಮಾರಾಟಗಾರರು, ಖರೀದಿದಾರರ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ನೊಂದಣಿ ಪುಸ್ತಕದಲ್ಲಿ ದಾಖಲಿಸಬೇಕು.
ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಆಸಿಡ್ ದಾಸ್ತಾನು ಇಟ್ಟುಕೊಂಡರೆ ಅಥವಾ ಮಾರಾಟ ಮಾಡಿದರೆ, ಸಂಬಂಧಪಟ್ಟ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರೊಂದಿಗೆ ದಂಡ ಹಾಗೂ ಜೈಲು ಶಿಕ್ಷೆಯ ಸಾಧ್ಯತೆಯೂ ಇದೆ.
ಅಲ್ಲದೆ, ಇಂತಹ ನಿಯಮಬಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವ ಕುರಿತು ಮಾಹಿತಿ ನೀಡಲಾಯಿತು.
ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳು ಮತ್ತು ಚಿಕಿತ್ಸೆ.
ಆಸಿಡ್ ದಾಳಿಗಾಗಿ ಒಳಗಾದ ಸಂತ್ರಸ್ತರಿಗೆ ಸರ್ಕಾರಿ ಮತ್ತು ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಹಾಗೂ ಸಂಪೂರ್ಣ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದು ಕಡ್ಡಾಯವಾಗಿದ್ದು, ಇದರ ಜೊತೆಗೆ ಜೀವಿತಾವಧಿಯವರೆಗೆ ದೊರೆಯುವ ವೈದ್ಯಕೀಯ ನೆರವಿನ ಸೌಲಭ್ಯಗಳನ್ನು ವಿವರಿಸಲಾಯಿತು.
ಪೊಲೀಸ್ ಇಲಾಖೆ ಕೈಗೊಳ್ಳಬಹುದಾದ ಕ್ರಮಗಳು
ದಾಳಿ ನಡೆದ ತಕ್ಷಣವೇ ತ್ವರಿತವಾಗಿ ಎಫ್‌ಐಆರ್ ದಾಖಲಿಸುವುದು, ಸಂತ್ರಸ್ತರಿಗೆ ತಕ್ಷಣದ ರಕ್ಷಣೆ ಒದಗಿಸುವುದು ಹಾಗೂ ಆರೋಪಿಗಳ ವಿರುದ್ಧ ತ್ವರಿತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವ ಪೊಲೀಸ್ ಇಲಾಖೆಯ ಕರ್ತವ್ಯಗಳ ಬಗ್ಗೆ ತಿಳಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯ
ಸಂತ್ರಸ್ತರಿಗೆ ಉಚಿತ ಕಾನೂನು ನೆರವು , ಸರ್ಕಾರದ ವತಿಯಿಂದ ಸಿಗುವ ಪರಿಹಾರ ಧನವನ್ನು ತ್ವರಿತವಾಗಿ ಪಡೆಯುವ ವಿಧಾನ ಹಾಗೂ ಕಾನೂನು ಪ್ರಕ್ರಿಯೆಗಳಲ್ಲಿ ಪ್ರಾಧಿಕಾರದಿಂದ ದೊರೆಯುವ ಬೆಂಬಲದ ಕುರಿತು ಜಾಗೃತಿ ಮೂಡಿಸಲಾಯಿತು.
ವಕೀಲರ ಸಂಘದಿಂದ ನೀಡುವ ಸಹಕಾರ
ಸಂತ್ರಸ್ತರಿಗೆ ನ್ಯಾಯಾಲಯದಲ್ಲಿ ಉಚಿತ ಕಾನೂನು ಪ್ರತಿನಿಧಿತ್ವವನ್ನು ಒದಗಿಸಲು ಮತ್ತು ಅವರಿಗೆ ಅಗತ್ಯವಿರುವ ಎಲ್ಲ ರೀತಿಯ ಕಾನೂನು ಮಾರ್ಗದರ್ಶನ ಹಾಗೂ ನೈತಿಕ ಬೆಂಬಲವನ್ನು ನೀಡಲು ವಕೀಲರ ಸಂಘ ದ ಸಹಕಾರವನ್ನು ಪಡೆಯಬಹುದು ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀಯುತ ಜಗದೀಶ್ ಶೇಣವ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರ್ ಎಮ್.ಎಸ್., ಉಪ ಪೊಲೀಸ್ ಆಯುಕ್ತರಾದ ಕೆ. ರವಿಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಹಾಗೂ ತಹಶೀಲ್ದಾರ್ ರಮೇಶ್ ಬಾಬು ಟಿ. ಅವರು ಉಪಸ್ಥಿತರಿದ್ದು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.
ಹಿರಿಯ ನ್ಯಾಯಾಧೀಶರು ಹಾಗೂ ದ.ಕ. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಜೈಬುನ್ನಿಸ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಸ್ವಯಂಸೇವಕರಿಗೆ ಮತ್ತು ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗುವ ಮೂಲಕ ಯಶಸ್ವಿಯಾಗಿ ಸಂಪೂರ್ಣಗೊಂಡಿತು.

