ನೇತ್ರಾವತಿ ನದಿ ಕಿನಾರೆಯಲ್ಲಿ ಮರಳು ಕಳ್ಳತನ : ಆರೋಪಿ ಬಂಧನ

0
141

ಬೆಳ್ತಂಗಡಿ : ನೇತ್ರಾವತಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಟಿಪ್ಪರ್‌ಗಳಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದು, ಎರಡು ಟಿಪ್ಪರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ (ಕಾ&ಸು) ಆನಂದ ಎಂ. ಅವರು ಸಿಬ್ಬಂದಿಯೊಂದಿಗೆ ಆ.18ರಂದು ಬೆಳಗಿನ ಜಾವ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಇಂದಬೆಟ್ಟು ಗ್ರಾಮದ ನೇತ್ರಾವತಿನಗರ ಬೊಳ್ಳೂರುಬೈಲು ಪ್ರದೇಶದ ನೇತ್ರಾವತಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು.

ಮಾಹಿತಿ ಆಧರಿಸಿ ಪೊಲೀಸರು ಬೆಳಗ್ಗೆ ಸುಮಾರು 4.45ಕ್ಕೆ ಸ್ಥಳಕ್ಕೆ ತೆರಳಿದಾಗ, ನದಿ ಕಿನಾರೆಯಲ್ಲಿ ಸುಮಾರು ಆರು ಮಂದಿ ಪ್ಲಾಸ್ಟಿಕ್ ಬುಟ್ಟಿಗಳ ಮೂಲಕ ಮರಳನ್ನು ಟಿಪ್ಪರ್ ಲಾರಿಗೆ ತುಂಬಿಸುತ್ತಿರುವುದು ಕಂಡುಬಂದಿದೆ. ಪೊಲೀಸರನ್ನು ಗಮನಿಸಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಸಿಬ್ಬಂದಿ ಬೆನ್ನಟ್ಟಿ ಬಂಟ್ವಾಳ ಮೂಲದ ಮಹಮ್ಮದ್ ಸುಹೈಲ್ ಎಂಬಾತನನ್ನು ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಪರಾರಿಯಾದ KA-18-B-1236 ಸಂಖ್ಯೆಯ ಟಿಪ್ಪರ್ ಚಾಲಕನ ಹೆಸರು ಇಬ್ರಾಹಿಂ ಹಾಗೂ ಮರಳು ತುಂಬುತ್ತಿದ್ದವರ ಪೈಕಿ ಇಂದಬೆಟ್ಟು ಗ್ರಾಮದ ಪುನೀತ್ ಎಂಬಾತನ ಹೆಸರು ತಿಳಿದುಬಂದಿದೆ ಎನ್ನಲಾಗಿದೆ. ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯಾವುದೇ ಸರಕಾರಿ ಪರವಾನಗಿ ಹೊಂದಿಲ್ಲ ಎಂಬುದನ್ನೂ ಬಂಧಿತ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಚರ ಸಮಕ್ಷಮ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ KA-19-AA-2826 ಸಂಖ್ಯೆಯ ಟಿಪ್ಪರ್‌ನಲ್ಲಿ ಸಂಪೂರ್ಣವಾಗಿ ಮರಳು ತುಂಬಿರುವುದು ಪತ್ತೆಯಾಗಿದೆ. ಇದರಲ್ಲಿದ್ದ ಮರಳಿನ ಅಂದಾಜು ಮೌಲ್ಯ ಸುಮಾರು ₹10,000 ಹಾಗೂ ಟಿಪ್ಪರ್‌ನ ಅಂದಾಜು ಮೌಲ್ಯ ಸುಮಾರು ₹3.50 ಲಕ್ಷ ಎಂದು ಅಂದಾಜಿಸಲಾಗಿದೆ.

ಮತ್ತೊಂದು KA-18-B-1236 ಸಂಖ್ಯೆಯ ಟಿಪ್ಪರ್‌ನಲ್ಲೂ ಸುಮಾರು 20 ಪ್ಲಾಸ್ಟಿಕ್ ಬುಟ್ಟಿಗಳಷ್ಟು ಮರಳು ಪತ್ತೆಯಾಗಿದ್ದು, ಅದರ ಅಂದಾಜು ಮೌಲ್ಯ ಸುಮಾರು ₹400 ಹಾಗೂ ಟಿಪ್ಪರ್‌ನ ಅಂದಾಜು ಮೌಲ್ಯ ಸುಮಾರು ₹4 ಲಕ್ಷ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಂಟ್ವಾಳದ ಮಹಮ್ಮದ್ ಸುಹೈಲ್, ಇಬ್ರಾಹಿಂ, ಇಂದಬೆಟ್ಟು ಗ್ರಾಮದ ನೇತ್ರಾವತಿನಗರದ ಪುನೀತ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದ ವಿವಿಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.