ಕಾಸರಗೋಡಿನಲ್ಲಿ ವಿಜೃಂಭಣೆಯ ‘ಸ್ನೇಹ ತರಂಗ’ : ಸಾಧಕರಿಗೆ ಸನ್ಮಾನದೊಂದಿಗೆ ಜರುಗಿದ ಪತ್ರಕರ್ತರ ಕುಟುಂಬ ಮಿಲನ

0
10

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಪತ್ರಕರ್ತರ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಕಾಸರಗೋಡಿನ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ‘ಸ್ನೇಹ ತರಂಗ’ ಪತ್ರಕರ್ತರ ಕುಟುಂಬ ಮಿಲನ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು.

​ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಸಹಿತ ಹಲವು ಮಂದಿಗೆ ಸನ್ಮಾನಿಸಲಾಯಿತು.

ಸಾಂಸ್ಕೃತಿಕ, ಶೈಕ್ಷಣಿಕ, ಸಮಾಜ ಸೇವೆ ಹಾಗೂ ಜಾನಪದ ಸಂಸ್ಕೃತಿ ರಕ್ಷಣೆಯ ಅನನ್ಯ ಸೇವೆಯನ್ನು ಗುರುತಿಸಿ ಗೌರವಪೂರ್ವಕವಾಗಿ ಜಾನಪದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಈ ಅರ್ಥಪೂರ್ಣ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಹಾಗೂ ಕನ್ನಡಪರ ಹೋರಾಟಗಾರ ಅಶೋಕ ಯಂಕಪ್ಪ ಚಂದರಗಿ, ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಹಾಜಿ, ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕು. ರೂಪಶ್ರೀ ವರ್ಕಾಡಿ, ರಾಷ್ಟ್ರೀಯ ಗೌರವ ಐಕಾನ್ ಪ್ರಶಸ್ತಿ ಪುರಸ್ಕೃತ ಶಾಫಿ ಬಂಡಸಾಲೆ ಸೇರಿದಂತೆ ಸಂಘದ ಪ್ರಮುಖ ಪದಾಧಿಕಾರಿಗಳಾದ ರವಿ ನಾಯ್ಕಾಪು, ಎ.ಆರ್. ಸುಬ್ಬಯ್ಯಕಟ್ಟೆ ಮತ್ತು ಇತರ ಗಣ್ಯರು ಉಪಸ್ಥಿತರಿದ್ದು ಸಮಾರಂಭದ ಯಶಸ್ಸಿಗೆ ಸಾಕ್ಷಿಯಾದರು.

ದೈನಂದಿನ ವೃತ್ತಿಪರ ಒತ್ತಡಗಳು ಹಾಗೂ ಜಂಜಾಟಗಳ ನಡುವೆ ನಲುಗುವ ಪತ್ರಕರ್ತರಿಗೆ ಇಂತಹ ಕುಟುಂಬ ಮಿಲನಗಳು ಮಾನಸಿಕ ಉಲ್ಲಾಸವನ್ನು ನೀಡುವುದರ ಜೊತೆಗೆ ಕುಟುಂಬಗಳ ನಡುವಿನ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ.

ಸಮಾಜಮುಖಿ ಚಿಂತನೆ, ಜಾನಪದ ಸಂಸ್ಕೃತಿಯ ಉಳಿವಿನ ಜಾಗೃತಿ ಹಾಗೂ ಪರಸ್ಪರ ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳಲು ಇಂತಹ ಸೌಹಾರ್ದಯುತ ಒಗ್ಗೂಡುವಿಕೆಗಳು ಅತ್ಯಂತ ಅಗತ್ಯ ಎಂಬುದನ್ನು ಈ ಕಾರ್ಯಕ್ರಮ ಸಾರಿದೆ.

​ ವರದಿ-ಮಂದಾರ ರಾಜೇಶ್