ಅಲೆವೂರಿನಲ್ಲಿ ಸೆ.4ರಂದು 4ನೇ ವರ್ಷದ ಲೋಬಾನ ಸೇವೆ ಹಾಗೂ ಹುಲಿವೇಷ ಕುಣಿತ

0
21

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಲೆವೂರಿನ ವೀರಕೇಸರಿ ಟೈಗರ್ಸ್ ವತಿಯಿಂದ 4ನೇ ವರ್ಷದ ಲೋಬಾನ ಸೇವೆ ಹಾಗೂ ಸಾಂಪ್ರದಾಯಿಕ ಹುಲಿವೇಷ ಕುಣಿತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸ್ವರ್ಗೀಯ ವಿನೋದ್ ಶೆಟ್ಟಿಗಾರ್ ಅವರ ಸ್ಮರಣಾರ್ಥ ನಡೆಯಲಿರುವ ಈ ಕಾರ್ಯಕ್ರಮವು ಸೆಪ್ಟೆಂಬರ್ 4ರಂದು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಗುಡ್ಡೆಯಂಗಡಿ, ಗಿರಿಜಾ ಸರ್ಕಲ್ ಬಳಿಯ ಸಂಕಲ್ಪ ಸಭಾಭವನದಲ್ಲಿ ನಡೆಯಲಿದೆ.

ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಭಕ್ತಿ ಹಾಗೂ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವೀರಕೇಸರಿ ಟೈಗರ್ಸ್ ತಂಡವು ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಬಾರಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ.

ಲೋಬಾನ ಸೇವೆಯೊಂದಿಗೆ ಹುಲಿವೇಷ ಕುಣಿತವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ. ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು ತಮ್ಮ ತನು-ಮನ-ಧನದ ಸಹಕಾರ ನೀಡುವಂತೆ ವೀರಕೇಸರಿ ಟೈಗರ್ಸ್ ಅಲೆವೂರು ಸಂಘಟನೆಯು ವಿನಂತಿಸಿದೆ.

ವರದಿ: ವಿನೋದ್ ಶೆಟ್ಟಿ, ಉಡುಪಿ