ಮನೆ ಮನೆಗೆ ರಾಮನಾಮ — ಕಾಸರಗೋಡಿನಲ್ಲಿ ಧರ್ಮ ಜಾಗೃತಿ ಭಜನಾ ಯಾತ್ರೆ

0
6

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡದ ವತಿಯಿಂದ ರಾಮಾಯಣ ಮಾಸಾಚರಣೆಯ ಅಂಗವಾಗಿ ಕಾಸರಗೋಡು ನಗರದಲ್ಲಿ ಒಂದು ತಿಂಗಳ ಕಾಲ ಆಯೋಜಿಸಿರುವ “ಧರ್ಮ ಜಾಗೃತಿ ಭಜನಾ ಯಾತ್ರೆ – ಮನೆ ಮನೆ ಭಜನೆ” ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯುತ್ತಿದೆ.

ಜುಲೈ 17ರಂದು ಆರಂಭಗೊಂಡಿರುವ ಈ ಭಜನಾ ಯಾತ್ರೆಯ ಮೂಲಕ ನಗರದ ವಿವಿಧ ಮನೆಗಳಿಗೆ ತೆರಳಿ ಶ್ರೀರಾಮನಾಮ ಸಂಕೀರ್ತನೆ ನಡೆಸುವುದರೊಂದಿಗೆ ಧರ್ಮ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಂದು ಮನೆಯಲ್ಲಿ ಪ್ರತಿದಿನವೂ ಭಜನೆ ನಡೆಯಬೇಕು ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಧಾರ್ಮಿಕ ಅಭಿಯಾನದಲ್ಲಿ ಮಹನೀಯರು, ಮಾತೆಯರು ಹಾಗೂ ಮಕ್ಕಳು ಸೇರಿದಂತೆ ಅನೇಕ ಭಜನಾಸಕ್ತರು ಭಾಗವಹಿಸುತ್ತಿದ್ದಾರೆ.

“ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮಾ” ಎಂಬ ಭಕ್ತಿಗೀತೆಯೊಂದಿಗೆ ಭಜನಾ ಸಂಕೀರ್ತನೆ ನಡೆಸಿ, ಶ್ರೀರಾಮನ ಸ್ಮರಣೆಯ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಿಸಲಾಗುತ್ತಿದೆ.

ಭಜನಾ ಯಾತ್ರೆಗೆ ತಮ್ಮ ಮನೆಗಳಲ್ಲಿ ವ್ಯವಸ್ಥೆ ಕಲ್ಪಿಸಿದ ಎಲ್ಲಾ ಕುಟುಂಬಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಶ್ರೀರಾಮನ ಅನುಗ್ರಹ ದೊರೆಯಲಿ ಎಂದು ಆಯೋಜಕರು ಹಾರೈಸಿದ್ದಾರೆ.

ರಾಮಾಯಣ ಮಾಸಾಚರಣೆಯ ಸಮಾರೋಪದ ಅಂಗವಾಗಿ ಅಂತಿಮ ಭಜನಾ ಸಂಕೀರ್ತನೆ ಆಗಸ್ಟ್ 17ರಂದು ಸಂಜೆ 7ರಿಂದ 8 ಗಂಟೆಯವರೆಗೆ ಕಾಸರಗೋಡು ಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.