ಬೆಳಾಲು ಶ್ರೀ ಧ.ಮಂ ಪ್ರೌಢಶಾಲೆಯಲ್ಲಿ ನೈತಿಕ ಶಿಕ್ಷಣ ಮತ್ತು ಕಾನೂನು ಅರಿವು ಕಾರ್ಯಕ್ರಮ

0
9

ಬೆಳಾಲು : ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಬೆಳಾಲು ಇವುಗಳ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ “ನೈತಿಕ ಶಿಕ್ಷಣ ಮತ್ತು ಕಾನೂನು ಅರಿವು” ಕಾರ್ಯಕ್ರಮವು ಆ. 18 ರಂದು ಜರಗಿತು.

ಕಾರ್ಯಕ್ರಮವನ್ನು ಶ್ರೀ ಧ.ಮಂ.ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ದಿವಾ ಕೊಕ್ಕಡ ಉದ್ಘಾಟಿಸಿ,ಕೇವಲ ಅಂಕಗಳನ್ನು ಗಳಿಸುವುದು ಅಥವಾ ಪದವಿ ಪಡೆಯುವುದು ಮಾತ್ರ ಶಿಕ್ಷಣವಲ್ಲ. ಒಳ್ಳೆಯ ಚಾರಿತ್ರ್ಯ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ. ಜೀವನದಲ್ಲಿ ಶಾಂತಿ ನೆಮ್ಮದಿ ಸಿಗಬೇಕಾದರೆ ಸಾತ್ವಿಕ ಜೀವನ ನಡೆಸಬೇಕು. ಎಲ್ಲರೂ ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಒಬ್ಬರಿಗೊಬ್ಬರು ಪರಸ್ಪರ ನಮ್ಮವರೇ ಎಂದು ಭಾವಿಸಿ ನಡೆಯಬೇಕೆನ್ನುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ನ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ಮಾತನಾಡಿ, ಮಕ್ಕಳ ಮನಸ್ಸು ಹಸಿ ಮಣ್ಣಿನ ಗೋಡೆ ಇದ್ದಹಾಗೆ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಬಹುದು ಎಂದರು.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್ ರವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಂದೆ ತಾಯಿಗೆ ಮತ್ತು ಗುರು ಹಿರಿಯರಿಗೆ ಗೌರವ ಕೊಡುವ ರೀತಿ ಹಾಗೂ ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಬಗ್ಗೆ ತಿಳಿಸುತ್ತಾ ರಸ್ತೆ ಸುರಕ್ಷತೆ ಹಾಗೂ ವಿದ್ಯಾರ್ಥಿಗಳು ಕಾನೂನುಗಳ ಅರಿವು ಪಡೆದು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ ಮಯ್ಯ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಸದುಪಯೋಗದ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ತಾಲೂಕು ಅಧ್ಯಕ್ಷ ರವಿರಾಜ್ ಚಾರ್ಮಾಡಿ,ಉಜಿರೆ ವಲಯ ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ. ಸೇವಾ ಪ್ರತಿನಿಧಿಗಳಾದ ತಾರಾನಾಥ್. ರೇಷ್ಮಾ, ಪ್ರಭ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಶಿಕ್ಷಕರಾದ ಕಿರಣ್ ಸ್ವಾಗತಿಸಿ, ಐಶ್ವರ್ಯ ವಂದಿಸಿದರು. ಸುಮನ್ ಯು. ಎಸ್ ಕಾರ್ಯಕ್ರಮ ನಿರೂಪಿಸಿದರು.