ಜಮೀನು ವಿವಾದಕ್ಕೆ ಅಣ್ಣನ ಕೊಲೆ : ಮಲದ ಗುಂಡಿಯಲ್ಲಿ ಶವ ಮುಚ್ಚಿಟ್ಟ ತಮ್ಮ!

0
31

ಅಮೃತೂರು ಹೋಬಳಿ ಬೆನವಾರ ಕೊಪ್ಪಲು ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮನೇ ಅಣ್ಣನನ್ನು ಕೊಲೆ ಮಾಡಿ, ಮೃತದೇಹವನ್ನು ಮಲದ ಗುಂಡಿಯಲ್ಲಿ ಮುಚ್ಚಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ.

ಕೊಲೆಯಾದವರನ್ನು ವರದರಾಜು (65) ಎಂದು ಗುರುತಿಸಲಾಗಿದ್ದು, ಅವರ ತಮ್ಮ ರಾಮದಾಸ್ (62) ಕೊಲೆ ಆರೋಪಿಯಾಗಿದ್ದಾರೆ. ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಒಂದು ಎಕರೆ ಜಮೀನಿನ ಭಾಗದ ವಿಚಾರವಾಗಿ ಸಹೋದರರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಆಗಸ್ಟ್ 15ರಂದು ನಡೆದ ಜಗಳ ವಿಕೋಪಕ್ಕೆ ತಿರುಗಿ ರಾಮದಾಸ್ ಅವರು ವರದರಾಜು ಅವರನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಬಳಿಕ ಮೃತದೇಹವನ್ನು ಮನೆಯ ಸಮೀಪದ ಮಲದ ಗುಂಡಿಗೆ ಹಾಕಿ, ಅದರ ಮೇಲೆ ಚಪ್ಪಡಿಕಲ್ಲು ಹಾಗೂ ತೆಂಗಿನ ಗರಿಗಳನ್ನು ಹಾಕಿ ಮುಚ್ಚಿಟ್ಟಿದ್ದರು ಎನ್ನಲಾಗಿದೆ.

ಈ ನಡುವೆ ವರದರಾಜು ಅವರ ತಂಗಿ ಪದ್ಮಮ್ಮ ಸೋಮವಾರ ಮನೆಗೆ ತೆರಳಿ ಅಣ್ಣನ ಬಗ್ಗೆ ರಾಮದಾಸ್ ಬಳಿ ವಿಚಾರಿಸಿದ್ದಾರೆ. ಆದರೆ ರಾಮದಾಸ್, ‘ಗೊತ್ತಿಲ್ಲ’ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಮತ್ತೆ ಪದ್ಮಮ್ಮ ಮನೆ ಬಳಿ ತೆರಳಿದಾಗ ರಾಮದಾಸ್ ಕಾಣಿಸಿಕೊಳ್ಳಲಿಲ್ಲ.

ಮನೆಯ ಸುತ್ತಮುತ್ತ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪದ್ಮಮ್ಮ ಪರಿಶೀಲಿಸಿದಾಗ ಮಲದ ಗುಂಡಿಯಲ್ಲಿ ಕಾಲುಗಳು ಕಾಣಿಸಿಕೊಂಡಿವೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಹುಲಿಯೂರುದುರ್ಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಲದ ಗುಂಡಿಯಿಂದ ಮೃತದೇಹವನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ಬಳಿಕ ಆರೋಪಿ ರಾಮದಾಸ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಮೀನು ವಿವಾದವೇ ಕೊಲೆಗೆ ಪ್ರಮುಖ ಕಾರಣವಾಗಿರಬಹುದು ಎಂಬ ಶಂಕೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದೆ.